ನವದೆಹಲಿ: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮತ್ತು ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು ಮೇ ತಿಂಗಳಿನಲ್ಲಿ ಪ್ರಮಾಣಿತ ಗುಣಮಟ್ಟ ಇರದ 155 ವೈದ್ಯಕೀಯ ಉತ್ಪನ್ನಗಳನ್ನು ಮತ್ತು ಎರಡು 'ನಕಲಿ' ಔಷಧಗಳನ್ನು ಗುರುತಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.
ಔಷಧವು ಕಳಪೆ ಅಥವಾ ನಕಲಿ ಎಂದು ಘೋಷಣೆಯಾದ ಬಳಿಕ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಪರವಾನಗಿ ಪ್ರಾಧಿಕಾರವು ಕ್ರಮ ಕೈಗೊಳ್ಳುತ್ತದೆ ಎಂದು ನಡ್ಡಾ ಹೇಳಿದ್ದಾರೆ.
ತನಿಖೆಯ ಅಂಶಗಳ ಆಧಾರದಲ್ಲಿ ಉತ್ಪಾದಕರು, ವಿತರಕರು ಮತ್ತು ಇತರ ವ್ಯಕ್ತಿಗಳ ವಿರುದ್ಧ ಪರವಾನಗಿಯ ಅಮಾನತು ಅಥವಾ ರದ್ದು ಅಥವಾ ಇತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರವು 2027ರ ಜುಲೈನಿಂದ ಹಂತ-ಹಂತವಾಗಿ ಎಲ್ಲಾ ಲಸಿಕೆಗಳು, ರೋಗ ನಿರೋಧಕಗಳು ಹಾಗೂ ಕ್ಯಾನ್ಸರ್ ಔಷಧಿಗಳಲ್ಲಿ ಕ್ಯುಆರ್ ಕೋಡ್ ಕಡ್ಡಾಯಗೊಳಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

