ಪುಣೆ: ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರು ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಸಮಾಜದಲ್ಲಿನ ವ್ಯವಸ್ಥಿತ ಹಿಂಸಾಚಾರವು ಅವರ (ಮಹಿಳೆ) ಪ್ರಗತಿಯನ್ನು ತಡೆಯುತ್ತಿದೆ ಎಂದೂ ಹೇಳಿದ್ದಾರೆ.
ಪುಣೆಯಲ್ಲಿ ಶನಿವಾರ ನಡೆದ 'ಛತ್ರೋನ್ ಕಿ ಗೂಂಜ್' (ಪಂಜರದಿಂದ ಹೊರಬನ್ನಿ) ಯುವ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.5 ಲಕ್ಷ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ಶೇ 80ರಷ್ಟು ಮಹಿಳೆಯರು ಕಿರುಕುಳವನ್ನು, ಶೇ 29ರಷ್ಟು ಮಹಿಳೆಯರು ದೈಹಿಕ ಹಿಂಸೆಯನ್ನು ಹಾಗೂ ಶೇ 6ರಷ್ಟು ಮಹಿಳೆಯರು ಅತ್ಯಾಚಾರಕ್ಕೆ ಒಳಾಗುತ್ತಿದ್ದಾರೆ ಎಂದಿದ್ದಾರೆ.
ಸಾಮಾಜಿಕ ಅಪಮಾನದ ಭಯದಿಂದ ಶೇ 99ರಷ್ಟು ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಲೇ ಇಲ್ಲ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಭದ್ರತೆ ಮತ್ತು ಸುರಕ್ಷತೆಯ ನೆಪದಲ್ಲಿ ಶೇ 50ರಷ್ಟು ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಶೇ 60ರಷ್ಟು ಮಹಿಳೆಯರು ಮನೆಯಿಂದ ಒಂಟಿಯಾಗಿ ಹೊರಗೆ ಹೋಗಲು ಸಾಧ್ಯವಿಲ್ಲ. ಗಂಡು ಮಕ್ಕಳಿಗೆ ಸಮಯದ ಯಾವುದೇ ನಿರ್ಬಂಧವಿಲ್ಲ, ಆದರೆ ಹೆಣ್ಣು ಮಕ್ಕಳು ರಾತ್ರಿ 8ಗಂಟೆಯೊಳಗೆ ಮನೆಗೆ ಬರಬೇಕು ಎಂಬ ನಿಬಂಧನೆಗಳಿವೆ ಎಂದು ತಿಳಿಸಿದ್ದಾರೆ.
ಮದುವೆ ಅಥವಾ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಶೇ 45ರಷ್ಟು ಮಹಿಳೆಯರು ಶಿಕ್ಷಣ ಅಥವಾ ಕೆಲಸವನ್ನು ಅರ್ಧಕ್ಕೇ ಬಿಡುತ್ತಿದ್ದಾರೆ. ಕೇವಲ ಶೇ 8ರಷ್ಟು ಮಹಿಳೆಯರು ಮಾತ್ರ ಸ್ವಂತ ಆಸ್ತಿ ಹೊಂದಿದ್ದಾರೆ ಎಂದು ವಿವರಿಸಿದ್ದಾರೆ.
15 ರಿಂದ 29 ವರ್ಷದೊಳಗಿನ ಯುವತಿಯರು ಮನೆಯಲ್ಲಿ ದಿನಕ್ಕೆ ಸರಾಸರಿ 5.5 ಗಂಟೆಗಳ ಕಾಲ ಕೆಲಸ ಮಾಡಿದರೆ, ಅದೇ ಮನೆಯ ಯುವಕರು ಕೇವಲ 30 ನಿಮಿಷ ಕೆಲಸ ಮಾಡುತ್ತಾರೆ. ಶೇ 84ರಷ್ಟು ಮಹಿಳೆಯರಿಗೆ ಕೆಲಸಕ್ಕೆ ಹೋಗಲು ಕುಟುಂಬದ ಅನುಮತಿ ಅಗತ್ಯವಿದೆ ಹಾಗೂ ಪುರುಷರಿಗಿಂತ ಶೇ 25ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರ ಜತೆಗಿನ ಸಂವಾದದಲ್ಲಿ ವಿದ್ಯಾರ್ಥಿನಿಯರು ತಾವು ಎದುರಿಸುವ ಕಿರುಕುಳದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.

