ಕಾಸರಗೋಡು: ವೆಳ್ಳರಿಕುಂಡು ಹಾಗೂ ಪಡನ್ನಕ್ಕಾಡ್‍ನಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗೃಹಿಣಿಯರು ಸಾವಿಗೀಡಾಗಿದ್ದಾರೆ.
ಕಾಞಂಗಾಡಿನ ಪಡನ್ನಕ್ಕಾಡ್ ನಿವಾಸಿ ಎಂ.ಕೆ ಅಬ್ದುಲ್ ರಹಮಾನ್ ಎಂಬವರ ಪುತ್ರಿ ಎಂ.ಕೆ ತಾಹಿರಾ(35) ಹಾಗೂ ವೆಳ್ಳರಿಕ್ಕುಂಡ್ ಆನಮಂಜಲ್ ನಿವಾಸಿ ಸತೀಶ ಎಂಬವರ ಪತ್ನಿ ದೀಪಾ (23)ಮೃತಪಟ್ಟವರು.
ಜು.28ರಂದು ಮನೆಯಲ್ಲಿ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಾಹಿರಾ ಅವರನ್ನು ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಇಲಿವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ, ವೆಳ್ಳರಿಕ್ಕುಂಡ್ ಆನಮಞಲ್ ನಿವಾಸಿ ಸತೀಶ ಎಂಬವರ ಪತ್ನಿ ದೀಪಾ (23)ಗುರುವಾರ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಪತಿ ಮನೆಯಲ್ಲಿ ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ದೀಪಾ ಅವರನ್ನು ಪೆರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತಚಿಕಿತ್ಸೆಗಾಗಿ ಕೋಝಿಕ್ಕೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.



