ಟೆಹರಾನ್: ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ `ಆರ್ಥಿಕ ಯುದ್ಧ'ದಲ್ಲಿ ಭಾಗವಹಿಸದಂತೆ ಇರಾನ್ ವಿವಿಧ ದೇಶಗಳಿಗೆ ಎಚ್ಚರಿಕೆ ನೀಡಿದ್ದು, ಅಂತಹ ದೇಶಗಳನ್ನು ಶತ್ರುಗಳೆಂದು ಪರಿಗಣಿಸಲಾಗುವುದು ಎಂದು ಹೇಳಿದೆ.
ಇರಾನ್ ಆರ್ಥಿಕತೆಯನ್ನು ಪ್ರತ್ಯೇಕಿಸುವ ಹೊಸ ಅಭಿಯಾನಕ್ಕೆ ಕೈಜೋಡಿಸುವಂತೆ ಅಮೆರಿಕ ತನ್ನ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರಿದೆ.
ನಮ್ಮ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರುವುದರಲ್ಲಿ ಭಾಗವಹಿಸುವ ಯಾವುದೇ ದೇಶವನ್ನು ಶತ್ರುವೆಂದು ಪರಿಗಣಿಸಲಾಗುವುದು. ಈ ದೇಶಗಳು ಅಮೆರಿಕದಿಂದ ದೂರವಿರಲು ನಿರಾಕರಿಸಿದರೆ, ಇರಾನ್ ಅವರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದು ಇರಾನ್ನ ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮುಹ್ಸಿನ್ ರೇಜಾಯಿ ಹೇಳಿದ್ದಾರೆ.
ಇರಾನ್ ಬಳಿ ಇನ್ನೂ ಹೆಚ್ಚಿನ ಕಾರ್ಡ್ಗಳಿವೆ. ಇದುವರೆಗೆ ನಾವು ಕೇವಲ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ. ಆದರೆ ಅಮೆರಿಕ ನಮ್ಮ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಲು ಬಯಸಿದರೆ, ಇರಾನ್ ಸುತ್ತಮುತ್ತ ಮತ್ತು ಇತರಡೆ ಅಮೆರಿಕ ಹೊಂದಿರುವ ತೈಲ ಮತ್ತು ಆರ್ಥಿಕ ಕಂಪೆನಿಗಳ ಮೇಲೆ ನಾವು ದಾಳಿ ಮಾಡುತ್ತೇವೆ ಎಂದು ರೇಜಾಯಿ ಬೆದರಿಕೆ ಹಾಕಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೇಜವಾಬ್ದಾರಿತನ ಮತ್ತು ಇರಾನ್ ಮೇಲಿನ ಅವರ ದಾಳಿಗಳು, ಪ್ರಪಂಚದಾದ್ಯಂತದ ಜನರು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವ ಬಯಕೆಯನ್ನು ಹೆಚ್ಚಿಸಿವೆ. ಟ್ರಂಪ್ ಪರಮಾಣು ಭದ್ರತೆಯ ಬದಲಿಗೆ ಪರಮಾಣು ಅಭದ್ರತೆಯನ್ನು ಸೃಷ್ಟಿಸಿದ್ದಾರೆ ಎಂದು ಇರಾನ್ ಆರೋಪಿಸಿದೆ.

