ಢಾಕಾ: 'ಪ್ರಧಾನಿ ತಾರಿಖ್ ರೆಹಮಾನ್ ಅವರ ಭಾರತ ಭೇಟಿಗೆ ಯಾವುದೇ ಆತುರ ಇಲ್ಲ. ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆಯಾದರೂ ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ರಾಜಿ ಇಲ್ಲ ' ಎಂದು ಬಾಂಗ್ಲಾದೇಶ ತಿಳಿಸಿದೆ.
'ದ್ವಿಪಕ್ಷೀಯ ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಬಳಿಕ ಸೂಕ್ತ ಸಂದರ್ಭದಲ್ಲಿ ಪ್ರಧಾನಿಯವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ' ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ಹುಮಾಯೂನ್ ಕಬೀರ್ ಅವರು ಶನಿವಾರ ಇಲ್ಲಿ ತಿಳಿಸಿದ್ದಾರೆ.
'ನೆರೆಯ ದೇಶ ಭಾರತದೊಂದಿಗೆ ನಾವು ಸಕಾರಾತ್ಮಕ ಸಂಬಂಧವನ್ನು ಬಯಸುತ್ತೇವೆ. ಆದರೆ, ಬಾಂಗ್ಲಾದೇಶದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇದು ಕಾರ್ಯಗತಗೊಳ್ಳಬೇಕಿದೆ. ನಮ್ಮ ನಿರೀಕ್ಷೆಯಂತೆ ನಾಳೆಯೇ ಒಪ್ಪಂದ ಏರ್ಪಟ್ಟರೆ ಮುಂದಿನ ವಾರವೇ ಭಾರತಕ್ಕೆ ಪ್ರಧಾನಿ ಭೇಟಿ ನೀಡಬಹುದು' ಎಂದು ಕಬೀರ್ ಅವರು ಹೇಳಿದ್ದಾರೆ.
ಸೆ.12, 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ರೆಹಮಾನ್ ಅವರನ್ನು ಭಾರತವು ಆಹ್ವಾನಿಸಿದೆ. ಆದರೆ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರ ವಿಚಾರವಾಗಿ ಉಭಯ ದೇಶಗಳ ನಡುವೆ ವೈಮನಸ್ಸು ಉಂಟಾದ ಕಾರಣಕ್ಕೆ, ತಾರಿಖ್ ಅವರು ಭಾರತಕ್ಕೆ ಬರುವುದು ಇನ್ನೂ ಖಚಿತವಾಗಿಲ್ಲ.

