ನವದೆಹಲಿ: ಪ್ರತಿಭಟನಾಕಾರರೊಂದಿಗೆ ಚರ್ಚೆಗೆ ಇಳಿಯದಂತೆ, ಅವರ ಪ್ರಶ್ನೆಗಳಿಗೆ ಅಥವಾ ಭಾವನಾತ್ಮಕ ಮನವಿಗಳಿಗೆ ಸ್ಪಂದಿಸದಂತೆ ದಿಲ್ಲಿ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
'ನಿಮ್ಮ ಸಿಟ್ಟಿನ ಮುಖವೇ ಅವರ ಕಂಟೆಂಟ್. ಅವರು ನಿಮ್ಮೊಂದಿಗೆ ಹೋರಾಡುತ್ತಿಲ್ಲ. ಅವರು ಒಂದು ಫಿಲ್ಮ್ ಮಾಡುತ್ತಿದ್ದಾರೆ, ಅದರಲ್ಲಿ ನೀವು ವಿಲನ್ ಪಾತ್ರ ಮಾಡಬೇಕೆಂದು ಅವರು ಬಯಸುತ್ತಾರೆ. ಆ ಪಾತ್ರವನ್ನು ನಿರಾಕರಿಸಿ' ಎಂದು ಪೊಲೀಸರಿಗೆ ತಿಳಿಸಲಾಗಿದೆ.
ಅನುಕಂಪ, ಕೋಪ ಅಥವಾ ಸಣ್ಣ ಪ್ರತಿಕ್ರಿಯೆಯನ್ನು ಸಹ ಪಡೆಯಲು ಪ್ರತಿಭಟನಾಕಾರರು ಬಳಸುವ ತಂತ್ರಗಳಿಗೆ ಮರುಳಾಗದಂತೆ ಹೊಸ ಮಾರ್ಗಸೂಚಿಗಳು ದಿಲ್ಲಿ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿವೆ. ಪ್ರತಿಭಟನಾಕಾರರು ಜೋರಾಗಿ ಅಳಬಹುದು,ಸಿಬ್ಬಂದಿಯ ಕಾಲಿಗೆ ಬೀಳಬಹುದು ಅಥವಾ ಕುಟುಂಬದ ಹಿನ್ನೆಲೆ ಅಥವಾ ಸಂಬಳದ ವಿಷಯಗಳಂತಹ ಅನುಕಂಪ ಅಥವಾ ಕೋಪವನ್ನು ಉಂಟುಮಾಡುವ ಪ್ರಶ್ನೆಗಳನ್ನು ಕೇಳಬಹುದು ಎಂದು ಅದು ಹೇಳಿದೆ.
ಯಾವುದೇ ಸಂಭಾಷಣೆ ನಡೆಸದಂತೆ ಅಥವಾ ಸಮ್ಮತಿ ಸೂಚಿಸದಂತೆ ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡಲಾಗಿದೆ. ಅಗತ್ಯವಿದ್ದಾಗ ಮಾತ್ರ 'ದಯವಿಟ್ಟು ಸಹಕರಿಸಿ,ನಾವು ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ' ಎಂದು ಹೇಳಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಸಿಬ್ಬಂದಿ ಮೌನ ಕಾಯ್ದುಕೊಳ್ಳಬೇಕು.
ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆಯ ನಂತರ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅಲ್ಲಿ ಜೆನ್-ಝೀ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ವೀಡಿಯೊ ಚಿತ್ರೀಕರಿಸುವ,ಕೆಲವೊಮ್ಮೆ ಸಿಟ್ಟನ್ನು ಪ್ರಚೋದಿಸುವ,ಇನ್ನು ಕೆಲವೊಮ್ಮೆ ತಮ್ಮ ಚೇಷ್ಟೆಗಳಿಂದ ನಗಿಸುವ ದೃಶ್ಯಗಳು ಕಂಡು ಬಂದಿದ್ದವು. ಹಲವು ಕಂಟೆಂಟ್ ಕ್ರಿಯೇಟರ್‌ಗಳು ಪೊಲೀಸರ ಪ್ರತಿಕ್ರಿಯೆಗಳನ್ನು ರೆಕಾರ್ಡ್ ಮಾಡಿದ್ದು,ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ತಾವು ಕ್ಯಾಮೆರಾದ ಎದುರಿನಲ್ಲಿದ್ದೇವೆ ಎನ್ನುವುದನ್ನು ಯಾವಾಗಲೂ ಗಮನಲ್ಲಿಟ್ಟುಕೊಳ್ಳಬೇಕು ಮತ್ತು ಶಾಂತತೆಯನ್ನು ಕಾಯ್ದುಕೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ.
'ಶಾಂತವಾದ ಮುಖವು ಅವರಿಗೆ ಏನನ್ನೂ ನೀಡುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಏನನ್ನೂ ಹೇಳದಂತೆ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಯಾವುದೇ ವಿವಾದಾತ್ಮಕ ಕ್ಲಿಪ್ ಇಲ್ಲದಿದ್ದರೆ ವೈರಲ್ ವೀಡಿಯೊವೂ ಇರುವುದಿಲ್ಲ ಎಂದು ಅವರಿಗೆ ಸ್ಪಷ್ಟವಾಗಿ ಹೇಳಲಾಗಿದೆ' ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಸಂಸ್ಥೆಗಳು ರೂಪಿಸಿರುವ ಸಲಹಾ ಸೂಚಿಯನ್ನು ದಿಲ್ಲಿ ಪೊಲೀಸರ ಎಲ್ಲ 15 ಜಿಲ್ಲೆಗಳು,ರೈಲ್ವೆ ಮತ್ತು ಮೆಟ್ರೋ ಘಟಕಗಳೊಂದಿಗೆ ಹಂಚಿಕೊಳ್ಳಲಾಗಿದೆ.
ಫೋನ್ ತಳ್ಳುವುದು,ಕಸಿದುಕೊಳ್ಳುವುದು ಅಥವಾ ವಸ್ತುಗಳನ್ನು ಎಸೆಯುವುದು,ಕೋಪದಿಂದ ಕಿರುಚಾಡುವಂತಹ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ನೀಡದಂತೆ ಸಿಬ್ಬಂದಿಗೆ ಸಲಹೆ ನೀಡಲಾಗಿದೆ. ತಮ್ಮ ಮುಂದೆ ಪ್ರದರ್ಶಿಸಲಾಗುವ ಯಾವುದೇ ರೀತಿಯ ಹಾಸ್ಯ,ಗೇಲಿ,ಹಾಡುಗಳು,ನೃತ್ಯಗಳು,ನಕಲಿ ಸೆಲ್ಯೂಟ್‌ಗಳು ಅಥವಾ ಪ್ಲೇಕಾರ್ಡ್‌ಗಳಿಗೆ ಪ್ರತಿಕ್ರಿಯಿಸದಿರಲು ಸೂಚಿಸಲಾಗಿದೆ.
ಮಹಿಳಾ ಪ್ರತಿಭಟನಾಕಾರರನ್ನು ಸ್ಪರ್ಶಿಸದಂತೆ,ಅವರನ್ನು ನಿಭಾಯಿಸಲು ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸುವಂತೆ ಮತ್ತು ನೆರವು ನೀಡಲು ಸಿದ್ಧರಾಗಿರುವಂತೆ ನಿರ್ದಿಷ್ಟ ನಿರ್ದೇಶನವನ್ನು ನೀಡಲಾಗಿದೆ.
ಪ್ರತಿಭಟನಾಕಾರರು ನೀಡುವ ಹೂವು ಅಥವಾ ಆಹಾರವನ್ನು ಸ್ವೀಕರಿಸಬಾರದು, ಪ್ರತಿಭಟನಾಕಾರರು ಮೂರ್ಛೆ ಹೋದಾಗ ಅಥವಾ ಗಾಯಗೊಂಡಾಗ ಅವರಿಗೆ ನೆರವಾಗಬೇಕು, ಆಂಬ್ಯುಲೆನ್ಸ್, ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು ಸುಲಭವಾಗಿ ಸಂಚರಿಸುವಂತೆ ಬ್ಯಾರಿಕೇಡ್‌ಗಳನ್ನು ತೆಗೆಯಬೇಕು, ಮಾತುಗಳು ಮತ್ತು ದೇಹಭಾಷೆ ಗೌರವಾನ್ವಿತವಾಗಿರಬೇಕು ಇತ್ಯಾದಿ ಸಲಹೆಗಳನ್ನು ಪೋಲಿಸರಿಗೆ ನೀಡಲಾಗಿದೆ ಎಂದು indianexpress.com ವರದಿ ಮಾಡಿದೆ.

