ಜೈಪುರ: ಸರ್ಕಾರಿ ಶಾಲೆಯ ಪರಿಶೀಲನೆ ಸಲುವಾಗಿ ಜೈಪುರದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದು, ಊರಿನಿಂದ ಹೊರಗಟ್ಟಿದ್ದಾರೆ.
'ಶಾಲೆಗಳನ್ನು ಸರಿಪಡಿಸಿ' (ಸ್ಕೂಲ್ ಠೀಕ್ ಕರೋ) ಅಭಿಯಾನದ ಭಾಗವಾಗಿ ಸಿಜೆಪಿ ಸಹ ಸಂಸ್ಥಾಫಕ ಅಶುತೋಷ್ ರಾಂಕಾ ನೇತೃತ್ವದ ತಂಡ, ಜೈಪುರ ಜಿಲ್ಲೆಯ ಬಾಗ್ರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಂಪುರ ಕನ್ವರ್ಪುರ ಗ್ರಾಮಕ್ಕೆ ಶುಕ್ರವಾರ (ಆ.21) ಬಂದಿತ್ತು. ಶಾಲೆಯ ಸ್ಥಿತಿಗತಿ ಪರಿಶೀಲಿಸುವುದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಸಿಜೆಪಿ ತಂಡದ ಉದ್ದೇಶವಾಗಿತ್ತು.
ಅವರು ಆಗಮಿಸುವ ಮಾಹಿತಿ ತಿಳಿದು ಗ್ರಾಮದ ಮುಖ್ಯ ರಸ್ತೆ ಬಳಿ ಜಮಾಯಿಸಿದ್ದ ಸ್ಥಳೀಯರು, ಊರಿನ ಒಳಗೆ ಬರುವ ವಾಹನಗಳ ತಪಾಸಣೆಗೆ ಮುಂದಾಗಿದ್ದರು. ಈ ವೇಳೆ, ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಂತೆ, ಸ್ಥಳೀಯರು ಸಿಜೆಪಿ ತಂಡವನ್ನು ಅಲ್ಲಿಂದ ಹೊರಗಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಉದ್ರಿಕ್ತರು ಸಿಜೆಪಿ ತಂಡವನ್ನು ಬೆನ್ನಟ್ಟಿಕೊಂಡು ಹೋಗುತ್ತಿರುವುದು, ನಿಂದಿಸುತ್ತಿರುವುದು, ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಸಿಜೆಪಿ ನಾಯಕರನ್ನು 'ನಗರ ನಕ್ಸಲರು', 'ರಾಷ್ಟ್ರ ವಿರೋಧಿಗಳು', 'ಪಾಕಿಸ್ತಾನಿಗಳು' ಎಂದು ಆರೋಪಿಸುತ್ತಿರುವುದೂ ದಾಖಲಾಗಿದೆ.
ಬಿಜೆಪಿ ವಿರುದ್ಧ ಕಿಡಿ
ತಮ್ಮ ಮೇಲಿನ ದಾಳಿಗೆ ಬಿಜೆಪಿಯೇ ಕಾರಣ ಎಂದು ಸಿಜೆಪಿ ನಾಯಕರು, ಕಾರ್ಯಕರ್ತರು ಆರೋಪಿಸಿದ್ದಾರೆ.
ಗೋಶಾಲೆಯಲ್ಲಿ ಶಾಲೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದೇ ಗ್ರಾಮದ ಕೆಲವರು ತಮಗೆ ಆಹ್ವಾನ ನೀಡಿದ್ದರು. ಅದರಂತೆ ಭೇಟಿ ನೀಡಿ, ಶಾಲೆಯನ್ನು ಪರಿಶೀಲಿಸಲು ಮುಂದಾಗಿದ್ದೆವು ಎಂದು ರಾಂಕಾ ಹೇಳಿದ್ದಾರೆ.
'ಹಲವು ವರ್ಷಗಳಿಂದ ದನದ ಕೊಟ್ಟಿಗೆಯಲ್ಲಿ ತರಗತಿಗಳು ನಡೆಯುತ್ತಿವೆ. ಕಳೆದ ವರ್ಷವೂ ಆ ಶಾಲೆಗೆ ಭೇಟಿ ನೀಡಿದ್ದೆವು. ಈ ಬಾರಿ ಭೇಟಿಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಆದರೆ ಬಿಜೆಪಿಯ ಗೂಂಡಾಗಳು ಮೊದಲೇ ಅಲ್ಲಿ ಜಮಾಯಿಸಿದ್ದರು. ನಮ್ಮ ಕಾರ್ಯಕರ್ತರ ಮೇಲೆ ದಾಳಿಯಾಗಿದೆ. ನಮ್ಮ ಕಾರುಗಳು, ಫೋನ್ಗಳಿಗೆ ಹಾನಿಯಾಗಿದೆ. ಮಹಿಳೆಯೊಬ್ಬರ ಮೇಲೂ ಹಲ್ಲೆಯಾಗಿದೆ. ನನ್ನ ಶರ್ಟ್ ಹರಿದಿದ್ದಾರೆ. ನಮ್ಮ ತಂಡದಲ್ಲಿದ್ದ ಒಬ್ಬರಿಗೆ ಕೈ ಮುರಿದಿದೆ' ಎಂದು ರಾಂಕಾ ಮಾಧ್ಯಮದವರಿಗೆ ಹೇಳಿದ್ದಾರೆ.
'ಸಿಜೆಪಿ ತಂಡದ ಮೇಲೆ ದಾಳಿ ಮಾಡಲು ಸ್ಥಳೀಯ ಬಿಜೆಪಿ ನಾಯಕರು ಹೊರಗಿನಿಂದ ಗೂಂಡಾಗಳನ್ನು ಕರೆತಂದಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರನ್ನು ಯಾರೂ ದೂರಬೇಡಿ' ಎಂದೂ ಮನವಿ ಮಾಡಿದ್ದಾರೆ.

