ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಬಯೋಮೆಡಿಕಲ್ ಎಂಜಿನಿಯರ್ ಹಾಗೂ ಕುಚಿಪುಡಿ ನೃತ್ಯಗಾರ್ತಿ ಸಾಧನಾ ಗೊಲ್ಲಪೂಡಿ ಅವರು ಎಫ್-1 ವೀಸಾ (ಅಮೆರಿಕದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಡುವ ವೀಸಾ) ವಂಚನೆ ಮಾಡಿದ್ದಾರೆ ಎಂದು ಮಾಡಲಾದ ಆರೋಪ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಆದರೆ, ಇದೀಗ ಅಮೆರಿಕದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಆಯರನ್ ರೈಟ್ಜ್ ಸ್ವತಃ ಸ್ಪಷ್ಟನೆ ನೀಡಿದ್ದು, 'ಸಾಧನಾ ಅವರು ಅಮೆರಿಕದ ಅಧಿಕೃತ ಪೌರತ್ವ ಹೊಂದಿರುವ ಪ್ರಜೆ' (Naturalized US Citizen) ಎಂದು ಹೇಳುವ ಮೂಲಕ ಸುಳ್ಳು ಆರೋಪಗಳಿಗೆ ತೆರೆ ಎಳೆದಿದ್ದಾರೆ. ಇತ್ತ, ಘಟನೆ ಬಗ್ಗೆ ಬೇಸರ ಹೊರಹಾಕಿರುವ ಸಾಧನಾ, ತಮ್ಮ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವ ಖಾತೆಗಳ ವಿರುದ್ಧ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
'CyberGreen09' ಎಂಬ 'ಎಕ್ಸ್' ಖಾತೆಯಲ್ಲಿ ಸಾಧನಾ ಅವರ ಕುಚಿಪುಡಿ ನೃತ್ಯದ ವಿಡಿಯೊವನ್ನು ಹಂಚಿಕೊಂಡು, '2014ರಿಂದ ಇವರು F-1 ವಿದ್ಯಾರ್ಥಿ ವೀಸಾ ಕಾಯ್ದುಕೊಳ್ಳಲು ಒಂದಾದ ಮೇಲೊಂದರಂತೆ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘಿಸಿ ನೃತ್ಯ ಪ್ರದರ್ಶನ ಹಾಗೂ ಟ್ಯೂಷನ್ ಮೂಲಕ ಹಣ ಗಳಿಸುತ್ತಿದ್ದಾರೆ' ಎಂದು ಆರೋಪಿಸಿ #Visafraud ಹ್ಯಾಷ್‌ಟ್ಯಾಗ್ ಬಳಸಿತ್ತು. ಈ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿತ್ತು.
'ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮ ಕಚೇರಿ ಈ ಬಗ್ಗೆ ತನಿಖೆ ನಡೆಸಿದೆ. ಸಾಧನಾ ಅವರು ವಿದ್ಯಾರ್ಥಿ ವೀಸಾದಲ್ಲಿ ಇಲ್ಲ. ಅವರು ಅಮೆರಿಕದ ಪೌರತ್ವ ಹೊಂದಿದ ಕಾನೂನುಬದ್ಧ ಪ್ರಜೆಯಾಗಿದ್ದಾರೆ. ವೀಸಾ ವಂಚನೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಆದರೆ, ಈ ಪ್ರಕರಣದಲ್ಲಿ ಯಾವುದೇ ವಂಚನೆ ನಡೆದಿಲ್ಲ' ಎಂದು ಹೂಸ್ಟನ್ ನಗರದ ಯುಎಸ್ ಅಟಾರ್ನಿ ಆಯರನ್ ರೈಟ್ಜ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಗಸ್ಟ್ 6ರಂದು ಪೋಸ್ಟ್ ಮಾಡಿರುವ ಸಾಧನಾ, 'ಕಳೆದ ಕೆಲವು ದಿನಗಳು ನನಗೂ ಮತ್ತು ನನ್ನ ಕುಟುಂಬಕ್ಕೂ ತೀವ್ರ ಕಷ್ಟಕರವಾಗಿದ್ದವು. ನನ್ನ ಅನುಮತಿಯಿಲ್ಲದೆ ನನ್ನ ನೃತ್ಯದ ವಿಡಿಯೊಗಳನ್ನು ಬಳಸಿ ನನ್ನ ಬಗ್ಗೆ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇಂತಹ ಪೋಸ್ಟ್‌ಗಳು ಕಂಡುಬಂದರೆ ತಕ್ಷಣವೇ 'ಸುಳ್ಳು ಮಾಹಿತಿ' ಎಂದು ರಿಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.
'ನಿಮ್ಮ ಬೆಂಬಲ ನನಗೆ ಅತ್ಯಂತ ಮೌಲ್ಯಯುತವಾದದ್ದು. ನನ್ನ ಪರವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು' ಎಂದೂ ಅವರು ಹೇಳಿದ್ದಾರೆ.
'ಪಾಕ್ ಟ್ರೋಲ್ ಖಾತೆ'
ಆನ್‌ಲೈನ್‌ನಲ್ಲಿ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, 'CyberGreen09' (ಇದು ಬಯೊ ಪ್ರಕಾರ ಪಾಕ್ ನಟ ಹಮ್ಜಾ ಸೊಹೈಲ್ ಅವರ 'ಫ್ಯಾನ್ ಅಕೌಂಟ್') ಖಾತೆಯ ಪ್ರೊಫೈಲ್ ಅನ್ನು ತಾತ್ಕಾಲಿಕವಾಗಿ ಪ್ರೈವೇಟ್ ಮಾಡಲಾಗಿದೆ. ಇದನ್ನು 'ಪಾಕಿಸ್ತಾನಿ ಟ್ರೋಲ್ ಖಾತೆ' ಎಂದು ಆರೋಪಿಸಲಾಗಿದ್ದು, ಇದರಲ್ಲಿ ಪದೇ ಪದೇ ಭಾರತ ವಿರೋಧಿ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಮೂಲದ ಮಹಿಳೆಯೊಬ್ಬರ ಬಗ್ಗೆ ವಿಡಿಯೊ ಹಂಚಿಕೊಂಡು, 'ವೀಸಾ ವಂಚಕಿ' ಎಂದು ನಿಂದಿಸಲಾಗಿದ್ದು, ಮಹಿಳೆಯ ಖಾಸಗಿ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಖಾತೆಯ ಅಡ್ಮಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅಮೆರಿಕದ ಅಟಾರ್ನಿ ಬಳಿ ನೆಟ್ಟಿಗರು ಮನವಿ ಮಾಡಿದ್ದಾರೆ.

