ನವದೆಹಲಿ: ಖಾಸಗಿಯಾಗಿ ಮಾಡಿದ ಜಾತಿ ನಿಂದನೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಎಸ್ಸಿ/ಎಸ್ಟಿ ಕಾಯ್ದೆಯಡಿ ಶಾಲಾ ವ್ಯವಸ್ಥಾಪಕನೋರ್ವನ ವಿರುದ್ಧ ಕಾನೂನು ಕ್ರಮವನ್ನು ರದ್ದುಗೊಳಿಸಲು ನಿರಾಕರಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತು.
2020ರ ಜನವರಿಯಲ್ಲಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದ್ದು, ದೂರುದಾರನ ಮಗ ಗಾಯಗೊಂಡಿದ್ದ. ಈ ಬಗ್ಗೆ ವಿಚಾರಿಸಲು ಶಾಲೆಗೆ ಹೋಗಿದ್ದ ದೂರುದಾರನ ಮೇಲೆ ಶಾಲಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಲಾಠಿಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಮರುದಿನ ಎಸ್ಸಿ/ಎಸ್ಟಿ ಕಾಯ್ದೆಯ ಕಲಂ 3(1)(ಆರ್) ಮತ್ತು 3(1)(ಎಸ್) ಅಡಿ ಪ್ರಕರಣ ದಾಖಲಾಗಿತ್ತು.
ಈ ಕಲಂಗಳ ಪ್ರಕಾರ, ಎಸ್ಸಿ/ಎಸ್ಟಿಯಲ್ಲದ ವ್ಯಕ್ತಿ ಸಾರ್ವಜನಿಕರು ನೋಡಬಹುದಾದ ಅಥವಾ ಕೇಳಬಹುದಾದ ಸ್ಥಳದಲ್ಲಿ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ನಿಂದಿಸಿದರೆ ಅಥವಾ ಅವಮಾನಿಸಿದರೆ ಮಾತ್ರ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಶಾಲಾ ವ್ಯವಸ್ಥಾಪಕರು ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಏಪ್ರಿಲ್ 2023ರಲ್ಲಿ ಹೈಕೋರ್ಟ್ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಕಾರಣ ವ್ಯವಸ್ಥಾಪಕರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆರೋಪಿತ ಘಟನೆಯು ಮುಚ್ಚಿದ ಕೊಠಡಿಯೊಳಗೆ ನಡೆದಿತ್ತು. ಕೊಠಡಿಗೆ ಕಿಟಕಿಗಳಿರಲಿಲ್ಲ ಮತ್ತು ಅದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿಲ್ಲ. ಹಾಗಾಗಿ ಅಲ್ಲಿ ನಡೆದ ಸಂಭಾಷಣೆ ಸಾರ್ವಜನಿಕ ವೀಕ್ಷಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಾಲಾ ವ್ಯವಸ್ಥಾಪಕರು ಅರ್ಜಿಯಲ್ಲಿ ವಾದಿಸಿದ್ದರು.
ಸಾಕ್ಷಿಗಳು ಜಗಳ ನಡೆದಿತ್ತು ಎಂದು ಹೇಳಿದ್ದಾರೆಯೇ ಹೊರತು ಜಾತಿ ನಿಂದನೆ ಮಾಡುವಾಗ ತಾವು ಕೊಠಡಿಯೊಳಗೆ ಇದ್ದೆವು ಎಂದು ಹೇಳಿಲ್ಲ ಎಂದೂ ಅವರು ವಾದಿಸಿದ್ದರು.
ಎಪ್ರಿಲ್ 2023ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ವ್ಯವಸ್ಥಾಪಕರು ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಗುರುವಾರ ವಿಚಾರಣೆ ಸಂದರ್ಭದಲ್ಲಿ ತನ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಸರ್ವೋಚ್ಚ ನ್ಯಾಯಾಲಯವು, ಯಾವುದೇ ಸ್ಥಳವನ್ನು ಸಾರ್ವಜನಿಕರ ವೀಕ್ಷಣೆಗೆ ಒಳಪಟ್ಟ ಸ್ಥಳ ಎಂದು ಕರೆಯಬೇಕಾದರೆ, ಅಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದು ಆ ನಿಂದನೆಯನ್ನು ನೋಡಲು ಅಥವಾ ಕೇಳಲು ಸಾಧ್ಯವಿರಬೇಕು. ನಾಲ್ಕು ಗೋಡೆಗಳ ನಡುವೆ ಸಾರ್ವಜನಿಕರ ಅನುಪಸ್ಥಿತಿಯಲ್ಲಿ ನಡೆಯುವ ಘಟನೆಗಳನ್ನು ಈ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಶಾಲಾ ವ್ಯವಸ್ಥಾಪಕರ ವಿರುದ್ಧ ಎಸ್ಸಿ/ಎಸ್ಟಿ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ಹಲ್ಲೆ, ಅಪಮಾನ ಇತ್ಯಾದಿ ಆರೋಪಗಳ ವಿಚಾರಣೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿತು.

