ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಐಸಿಎಆರ್-ಸಿಪಿಸಿಆರ್‍ಐ)ದ ಅಧೀನದಲ್ಲಿರುವ ಕಾವುಗೋಳಿ-ಚೌಕಿ ಪ್ರದೇಶದಲ್ಲಿ ಸಮುದ್ರ ಕೊರೆತದಿಂದ ಭಾರೀ ಹಾನಿಯುಂಟಾಗಿದೆ.
ಸಿಪಿಸಿಆರ್‍ಐ ತೋಟಗಾರಿಕಾ ಪ್ರದೇಶದ ಸುಮಾರು ಒಂದು ಕಿ.ಮೀ ವರೆಗೂ ಕರಾವಳಿ ವಿಸ್ತರಿಸಿದ್ದು, ಕಡಲ್ಕೊರೆತದಿಂದ ಈ ಪ್ರದೇಶದ ರಸ್ತೆ ಸಮುದ್ರ ಪಾಲಾಗಿದೆ. ಈ ಪ್ರದೇಶದಲ್ಲಿ 80ಮೀ. ವರೆಗೆ ಸಿಪಿಸಿಆರ್‍ಐ ಆವರಣಗೋಡೆಯೂ ಸಮುದ್ರಪಾಲಾಗಿದೆ. ಇನ್ನೂ 30ಮೀ. ವರೆಗಿನ ಆವರಣಗೋಡೆ ಸಮುದ್ರಪಾಲಾಗುವ ಭೀತಿ ಎದುರಿಸುತ್ತಿದೆ. ಸಿಪಿಸಿಆರ್‍ಐ ತೋಗಾರಿಕಾ ಪ್ರದೇಶದಿಂದ 30 ಮೀಟರ್ ದೂರದಲ್ಲಿದ್ದ ಸಮುದ್ರ ಭಾರೀ ಕಡಲ್ಕೊರೆತದಿಂದ ಆವರಣಗೋಡೆ ವರೆಗೂ ಸಮುದ್ರ ಆಕ್ರಮಿಸಿಕೊಂಡಿದೆ. ಇಲ್ಲಿ ಸಿಪಿಸಿಆರ್‍ಐನ ಕೃಷಿಭೂಮಿಯೂ ಅಪಾಯ ಎದುರಿಸುತ್ತಿದೆ. ಹಲವಾರು ತೆಂಗಿನಮರಗಳು ಸಮುದ್ರಪಾಲಾಗುವ ಭೀತಿಯಲ್ಲಿದೆ.
ಈ ಪ್ರದೇಶದಲ್ಲಿ ಸೂಕ್ತ ತಡೆಗೋಡೆ ನಿರ್ಮಾಣಮಾಡುವಂತೆ ಸಂಸದ, ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು ಶಾಸಕ, ಪಂಚಾಯಿತಿ ಅಧ್ಯಕ್ಷ ಹಾಗೂ ಕಿರುನೀರಾವರಿ ಇಲಾಖೆ ಅಧಿಕಾರಿಗಳನ್ನು ಸಿಪಿಸಿಆರ್‍ಐ ಅಧಿಕಾರಿಗಳು ಮನವಿಮೂಲಕ ಆಗ್ರಹಿಸಿದ್ದಾರೆ.

