ವಿಶಾಖಪಟ್ಟಣ: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಕೆನ್ನೆಗೆ ಹೊಡೆದ ಬೆನ್ನಲ್ಲೇ ತೀವ್ರ ಆತಂಕಕ್ಕೊಳಗಾದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಿಸಿಟಿವಿ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿವೆ.
ವಿದ್ಯಾರ್ಥಿಯು ಹೋಮ್ವರ್ಕ್ ತೋರಿಸಲು ಕೈಯಲ್ಲಿ ಸ್ಲೇಟ್ ಹಿಡಿದು ಶಿಕ್ಷಕಿಯ ಮೇಜಿನ ಬಳಿ ಸರತಿ ಸಾಲಿನಲ್ಲಿ ನಿಂತಿದ್ದನು. ಈ ವೇಳೆ ಬಾಲಕನನ್ನು ಗದರಿಸುವ ಶಿಕ್ಷಕಿ ಸಮವಸ್ತ್ರ ಹಿಡಿದು ಹತ್ತಿರಕ್ಕೆ ಎಳೆದು ಕೆನ್ನೆಗೆ ಹೊಡೆಯುತ್ತಾರೆ. ತಕ್ಷಣವೇ ಬಾಲಕ ಕುಸಿದು ಬಿದ್ದಿದ್ದಾನೆ. ಗಾಬರಿಗೊಂಡ ಶಿಕ್ಷಕಿ ಆತನನ್ನು ಎಬ್ಬಿಸಲು ಯತ್ನಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಶಾಲಾ ಸಿಬ್ಬಂದಿ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ.
ಪೋಷಕರ ಪ್ರತಿಭಟನೆ, ತನಿಖೆಗೆ ಆದೇಶ:
ಶಿಕ್ಷಕಿಯ ಹಲ್ಲೆ ಹಾಗೂ ಅದರಿಂದ ಗಾಬರಿಗೊಂಡಿರುವುದೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ಪೋಷಕರು ಹಾಗೂ ಸಂಬಂಧಿಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶಿಕ್ಷಕಿ ಹೊಡೆದ ಬೆನ್ನಲ್ಲೇ ತರಗತಿಯಲ್ಲಿ ಕುಸಿದುಬಿದ್ದ ಬಾಲಕ ನಂತರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಬಿಎನ್ಎಸ್ಎಸ್ ಸೆಕ್ಷನ್ 194ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಆಂಧ್ರಪ್ರದೇಶದ ಶಿಕ್ಷಣ ಸಚಿವ ನಾರಾ ಲೋಕೇಶ್ ಆಘಾತ ವ್ಯಕ್ತಪಡಿಸಿದ್ದು, ಶಿಕ್ಷಕಿ ಹಾಗೂ ಶಾಲೆಯ ಆಡಳಿತದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು ಸಮಗ್ರ ತನಿಖೆಗಾಗಿ ತ್ರಿ ಸದಸ್ಯ ಸಮಿತಿಯನ್ನು ರಚಿಸಿದೆ.

