ಮುಂಬೈ: ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವ ಬದಲು 'ರಾಜಕೀಯ ಹಾಸ್ಯ ಕಾರ್ಯಕ್ರಮ' ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷ ಕೇಶವ್ ಉಪಾಧ್ಯೆ ಅವರು ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ (ಆ.22) ಪುಣೆಯಲ್ಲಿ ವಿದ್ಯಾರ್ಥಿಗಳ ಜೊತೆ 'ಛತ್ರೋನ್ ಕಿ ಗೂಂಜ್' ಮಹಿಳಾ ವಿಶೇಷ ರ್ಯಾಲಿ ನಡೆಸಿದ್ದರು.
ಈ ಬಗ್ಗೆ ಟೀಕೆ ಮಾಡಿರುವ ಕೇಶವ್ ಉಪಾಧ್ಯೆ ಅವರು, 'ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಸಂವಾದ ಬದಲಾಗಿ ಅವರು ರಾಜಕಾರಣ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ಮಹಿಳಾ ಮೀಸಲಾತಿ ಬಗ್ಗೆ ಕಾಂಗ್ರೆಸ್ ಚರ್ಚಿಸುತ್ತಿದೆ. ಆದರೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆ ಸ್ವೀಕರಿಸಿದಾಗ ಹಾಗೂ 'ತ್ರಿವಳಿ ತಲಾಖ್' ವಿರುದ್ಧದ ಕಾನೂನು ಜಾರಿಗೆ ತಂದಾಗ ವಿರೋಧ ಮಾಡಿದ್ದರು. ಮನುವಾದ ಬಗ್ಗೆ ಮಾತನಾಡುವ ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು' ಎಂದಿದ್ದಾರೆ.
ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಹೀಗಾಗಿ ಜಾತಿ, ಧರ್ಮದ ನಡುವೆ ಕಿಡಿ ಹೊತ್ತಿಸುವ ಪ್ರಯತ್ನ ಮಾಡುತ್ತಿದೆ. ಮುಂದಿನ ಚುನಾವವಣೆಯಲ್ಲಿ ಸೋಲಿನ ಹತಾಶೆ, ಭಯದಿಂದ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಿ ಹಾಸ್ಯಕ್ಕೆ ಈಡಾಗುತ್ತಿದ್ದಾರೆ' ಎಂದು ಟೀಕೆ ಮಾಡಿದ್ದಾರೆ.
ಕೇಶವ್ ಉಪಾಧ್ಯೆ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ಸಾವಂತ್, 'ರಾಹುಲ್ ಗಾಂಧಿ ಅವರು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಯುವಕರ ಬದಲಾವಣೆಯಿಂದ ಬಿಜೆಪಿ ಆತಂಕಕ್ಕೆ ಒಳಗಾಗುತ್ತಿದೆ. ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮಕ್ಕೆ ಹಾಜರು ಆಗಬಾರದೆಂದು ಮೆಟ್ರೊ ಸ್ಥಗಿತಗೊಳಿಸಿದ್ದರು. ಪೋಷಕರಿಗೆ ಕರೆ ಮಾಡಿ ತಪ್ಪು ಮಾಹಿತಿ ನೀಡಿದ್ದರು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ 'ಛತ್ರೋನ್ ಕಿ ಗೂಂಜ್' ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಈ ಬೆಳವಣಿಗೆ ನೋಡಿ ಬಿಜೆಪಿಗರು ಭಯ ಪಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ.

