HEALTH TIPS

ಲೈವ್‌ ನ್ಯೂಸ್ ಕಾರ್ಯಕ್ರಮದಲ್ಲೇ ನಿದ್ದೆಗೆ ಜಾರಿದ ಆಯಂಕರ್‌, ವಿಡಿಯೋ ಹಿಂದಿನ ಕಥೆ ಕೇಳಿ ಭಾವುಕರಾದ ವೀಕ್ಷಕರು!

ಶಾಲೆಯಲ್ಲಿ ಪಾಠ ಕೇಳುವಾಗಲೋ, ಕಾರ್ಯಕ್ರಮಗಳಲ್ಲಿ ಭಾಷಣ ಕೇಳುವಾಗಲೋ ನಿದ್ದೆ ಬರುವುದುಂಟು. ಆದರೆ ಅಮೆರಿಕದ ನ್ಯೂಸ್‌ ಆಯಂಕರ್‌ ಒಬ್ಬಳು ನೇರಪ್ರಸಾರ ಕಾರ್ಯಕ್ರಮದಲ್ಲಿಯೇ ನಿದ್ದೆಗೆ ಜಾರಿದ್ದಾಳೆ. ಈ ಸುದ್ದಿ ಭಾರಿ ವೈರಲ್‌ ಆಗಿ ಸಂಚಲನ ಸೃಷ್ಟಿಸಿದೆ. ಬಳಿಕ ಆಯಂಕರ್‌ ನೀಡಿದ ಪ್ರತಿಕ್ರಿಯೆ ನೆಟ್ಟಿಗರ ಕಣ್ಣು ಮಂಜಾಗಿಸಿದೆ.

ತನಗೆ 8 ತಿಂಗಳು ಮಗುವಿದೆ, ರಾತ್ರಿಯಿಡೀ ನಿದ್ದೆ ಮಾಡಿಲ್ಲ, ನಸುಕಿನ ಶಿಫ್ಟ್‌ಗಾಗಿ ರಾತ್ರಿ 1:30ಕ್ಕೇ ಎದ್ದಿದ್ದೇನೆ ಎಂದಿದ್ದಕ್ಕೆ ಜನ ಭಾವುಕರಾಗಿದ್ದಾರೆ.

ನೇರ ಪ್ರಸಾರದ ಸಮಯದಲ್ಲಿ ಕ್ಯಾಮೆರಾ ಮುಂಭಾಗದಲ್ಲೇ ಕಣ್ಣು ಮುಚ್ಚಿ ನಿದ್ದೆಗೆ ಜಾರುವ ಸನ್ನಿವೇಶ ಯಾವುದೇ ಸುದ್ದಿ ನಿರೂಪಕಿಗಾದರೂ ಒಂದು ದುಃಸ್ವಪ್ನವೇ ಸರಿ. ಅಮೆರಿಕದ 'ಫಾಕ್ಸ್ 13' ಮೆಂಫಿಸ್ ವಾಹಿನಿಯ ಪ್ರಸಿದ್ಧ ನಿರೂಪಕಿ ಡೊಮಿನಿಕ್ ಡಿಲ್ಲನ್ (32) ಅವರಿಗೂ ಇತ್ತೀಚೆಗೆ ಇಂತಹುದೇ ಒಂದು ಮುಜುಗರದ ಸನ್ನಿವೇಶ ಎದುರಾಗಿತ್ತು. ಪ್ರಸಾರದ ವೇಳೆ ತಾನು ತೂಕಡಿಸುತ್ತಿರುವುದನ್ನು ಅರಿತ ಕ್ಷಣ, ಅವರಿಗೆ ಭೂಮಿ ಕುಸಿತದ ಅನುಭವವಾಗಿತ್ತು. ಆದರೆ, ಈ ವೈರಲ್ ಕ್ಲಿಪ್‌ನ ಹಿಂದಿದ್ದ ಅವರ ಕಷ್ಟಕರ ಕಥೆ ಹೊರಬರುತ್ತಿದ್ದಂತೆ, ಜಗತ್ತಿನಾದ್ಯಂತ ಲಕ್ಷಾಂತರ ಜನರು ಅವರ ಪರವಾಗಿ ನಿಂತು ಅಪಾರ ಬೆಂಬಲ ಸೂಚಿಸಿದ್ದಾರೆ.

ನೇರ ಪ್ರಸಾರದಲ್ಲಿ ಆಗಿದ್ದೇನು?

ಜುಲೈ 29ರ ಮುಂಜಾನೆ 'ಗುಡ್ ಮಾರ್ನಿಂಗ್ ಮೆಂಫಿಸ್' ಕಾರ್ಯಕ್ರಮದ ನೇರ ಪ್ರಸಾರ ನಡೆಯುತ್ತಿತ್ತು. ವರದಿಗಾರರೊಬ್ಬರು ಸುದ್ದಿ ವಾಚಿಸುತ್ತಿದ್ದಾಗ, ಸ್ಟುಡಿಯೋದಲ್ಲಿದ್ದ ನಿರೂಪಕಿ ಡೊಮಿನಿಕ್ ಡಿಲ್ಲನ್ ದಣಿವಿನಿಂದಾಗಿ ಕೈಗಳ ಮೇಲೆ ತಲೆಯಿಟ್ಟು ಕೆಲ ಕ್ಷಣಗಳ ಕಾಲ ನಿದ್ದೆಗೆ ಜಾರಿದ್ದರು. ಇದನ್ನು ಗಮನಿಸಿದ ಅವರ ಸಹೋದ್ಯೋಗಿ ಹಾಗೂ ಹವಾಮಾನ ತಜ್ಞೆ ಬ್ರಿಟಾನಿ ಡುಬೋಸ್, ಕೊಠಡಿಯ ಆಚೆಯಿಂದಲೇ ಪಿಸುಮಾತಿನಲ್ಲಿ ಡಿಲ್ಲನ್ ಹೆಸರು ಕೂಗಿ ಅವರನ್ನು ಎಚ್ಚರಿಸಲು ಯತ್ನಿಸಿದರು.

ಡಿಲ್ಲನ್ ಕಣ್ಣು ತೆರೆಯುವಷ್ಟರಲ್ಲಿ ಮುಂದಿನ ಕ್ಯಾಮೆರಾ ಶಾಟ್ ಅವರ ಮೇಲೆಯೇ ಬಂದಿತ್ತು. ನನ್ನ ಕಣ್ಣು ತೆರೆದಾಗ ಕ್ಯಾಮೆರಾ ನನ್ನನ್ನೇ ನೋಡುತ್ತಿತ್ತು. 'ಓ ದೇವರೇ, ಇದು ನನಗೆ ಮಾತ್ರ ಸಂಭವಿಸಲು ಸಾಧ್ಯ ಎಂದು ನನಗನಿಸಿತು. ಇದು ಕೆಟ್ಟ ಕನಸಾಗಿರಲಿ ಎಂದು ನಾನು ಟೇಬಲ್ ಕೆಳಗೆ ಪ್ರಾರ್ಥಿಸುತ್ತಿದ್ದೆ ಎಂದು ಡಿಲ್ಲನ್ ಆ ಕ್ಷಣದ ಭಯವನ್ನು ನೆನಪಿಸಿಕೊಳ್ಳುತ್ತಾರೆ. ವಿಶೇಷವೆಂದರೆ, ಡಿಲ್ಲನ್ ಅವರು ತಮ್ಮ ಟ್ಯಾಬ್ಲೆಟ್ ನೋಡುತ್ತಿದ್ದಾರೆ ಎಂದು ಭಾವಿಸಿದ್ದ ನಿರ್ಮಾಪಕರಿಗೂ ಸಹ ಅವರು ನಿದ್ದೆ ಮಾಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿರಲಿಲ್ಲ.

ಆ ರಾತ್ರಿ ನಿದ್ದೆ ಕೆಡಿಸಿದ್ದ 8 ತಿಂಗಳ ಮಗು

ಆಗಸ್ಟ್ 5 ರಂದು ಪ್ರಸಿದ್ಧ 'TODAY' ಶೋನಲ್ಲಿ ಭಾಗವಹಿಸಿದ ಡಿಲ್ಲನ್, ಆ ದುರಂತಮಯ ದಿನದ ಹಿನ್ನೆಲೆಯನ್ನು ಹಂಚಿಕೊಂಡರು. 2 ವರ್ಷದ ಡಕೋಟಾ ಹಾಗೂ 8 ತಿಂಗಳ ಡೆಲಿಲಾ ಎಂಬ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ಡಿಲ್ಲನ್, ಆ ಘಟನೆಯ ಹಿಂದಿನ ರಾತ್ರಿ ಸಂಪೂರ್ಣವಾಗಿ ನಿದ್ದೆಗೆಟ್ಟಿದ್ದರು. ಅವರ ಪತಿ ಬಿಎನ್‌ಎಸ್‌ಎಫ್ ರೈಲ್ವೆಯಲ್ಲಿ ಡಬಲ್ ಶಿಫ್ಟ್ ಕೆಲಸದಲ್ಲಿದ್ದ ಕಾರಣ ಡಿಲ್ಲನ್ ಒಬ್ಬರೇ ಮಕ್ಕಳನ್ನು ಮಲಗಿಸಲು ಹರಸಾಹಸ ಪಡುತ್ತಿದ್ದರು. ನನ್ನ 8 ತಿಂಗಳ ಮಗುವಿಗೆ ಹಲ್ಲು ಹುಟ್ಟುತ್ತಿದ್ದವು . ಭಾರಿ ನೋವಿನಿಂದಾಗಿ ಆಕೆ ಏನೇ ಮಾಡಿದರೂ ಸಮಾಧಾನಗೊಳ್ಳುತ್ತಿರಲಿಲ್ಲ. ಔಷಧ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಕೆಯನ್ನು ಮಲಗಿಸುವಷ್ಟರಲ್ಲಿ ರಾತ್ರಿ 11 ಗಂಟೆಯಾಗಿತ್ತು ಎಂದು ಅವರು ವಿವರಿಸಿದರು.

ಸಾಮಾನ್ಯವಾಗಿ ಬೆಳಗಿನ ಜಾವ 4:30ರ ಶಿಫ್ಟ್‌ಗಾಗಿ ಡಿಲ್ಲನ್ 1:30ಕ್ಕೇ ಎದ್ದು ಸಿದ್ಧರಾಗಬೇಕಿತ್ತು. ಆದರೆ, ಅಂದು ರಾತ್ರಿ ಸ್ವಲ್ಪವೂ ನಿದ್ದೆ ಸಿಗದ ಕಾರಣ, ಸತತ ಕೆಲಸದ ಒತ್ತಡದಿಂದಾಗಿ ಸ್ಟುಡಿಯೋದಲ್ಲೇ ಕೆಲ ಕ್ಷಣ ತೂಕಡಿಸಿದ್ದರು.

ಜಾಲತಾಣದಲ್ಲಿ ಹರಿದುಬಂದ ಸಾಹಾನುಭೂತಿಯ ಅಲೆ

ವೀಡಿಯೊ ವೈರಲ್ ಆಗುತ್ತಿದ್ದಂತೆ ಜಾಲತಾಣಗಳಲ್ಲಿ ಟೀಕೆಗಳು ಬರಬಹುದು ಎಂದು ಅಂಜಿದ್ದ ಡಿಲ್ಲನ್ ಅವರಿಗೆ, ಜಗತ್ತಿನಾದ್ಯಂತದಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ವಿಶೇಷವಾಗಿ ಉದ್ಯೋಗಸ್ಥ ತಾಯಂದಿರು ಮತ್ತು ಹೆತ್ತವರಿಂದ ಅಪಾರ ಪ್ರೀತಿ ಹಾಗೂ ಕಾಳಜಿ ಹರಿದುಬಂದಿದೆ. ಅವರ ಸಹ-ನಿರೂಪಕ ಎರ್ನೀ ಫ್ರೀಮನ್, ಡಿಲ್ಲನ್ ನಿದ್ದೆ ಮಾಡುವಂತೆ ನಟಿಸುತ್ತಿದ್ದ ಸೆಲ್ಫಿ ಹಂಚಿಕೊಂಡು, ಈಗ ಶೋ ಮುಗಿದಿದೆ, ಡಿಲ್ಲನ್ ಮತ್ತೆ ನಿದ್ದೆ ಮಾಡುವ ಸಮಯ ಬಂದಿದೆ ಎಂದು ತಮಾಷೆಯಾಗಿ ಪೋಸ್ಟ್ ಮಾಡಿದ್ದರು. ಬೆಳಗಿನ ಪಾಳಿಗಳು ಅತ್ಯಂತ ಸವಾಲಿನವು, ಆಕೆಗೆ ಸ್ವಲ್ಪ ಬೆಂಬಲ ನೀಡಿ , ಮನೆಯಲ್ಲಿ ಪುಟ್ಟ ಮಗುವಿದ್ದಾಗ ಪ್ರತಿಯೊಬ್ಬ ತಾಯಿಗೂ ಈ ಅನುಭವವಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಮಾನವೀಯತೆಯ ಸುಂದರ ಮುಖ

ಸಾಮಾಜಿಕ ಜಾಲತಾಣಗಳು ಹೆಚ್ಚಾಗಿ ನಕಾರಾತ್ಮಕತೆಗೆ ಹೆಸರಾಗಿದ್ದರೂ, ಈ ಘಟನೆ ತನಗೆ ಮಾನವೀಯತೆಯ ಸುಂದರ ಮುಖವನ್ನು ತೋರಿಸಿದೆ ಎಂದು ಡಿಲ್ಲನ್ ಭಾವುಕರಾಗಿದ್ದಾರೆ. 2017 ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿರುವ ಡಿಲ್ಲನ್, 2019 ರಲ್ಲಿ ಮೆಂಫಿಸ್ ವಾಹಿನಿಯನ್ನು ಸೇರಿಕೊಂಡಿದ್ದರು. ಉದ್ಯೋಗಸ್ಥ ತಾಯಂದಿರು ತಮ್ಮ ಕೆಲಸದಲ್ಲೂ 100% ಶ್ರಮ ಹಾಕಿ, ಮನೆಗೆ ತೆರಳಿದ ನಂತರ ಮತ್ತೊಂದು ಪೂರ್ಣಾವಧಿ ಕೆಲಸದಂತೆ ಕುಟುಂಬದ ನಿರ್ವಹಣೆ ಮಾಡುತ್ತಾರೆ. ಜನರ ಈ ಸಾಹಾನುಭೂತಿ ನನಗೆ ಅಪಾರ ಶಕ್ತಿಯನ್ನು ನೀಡಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries