ನವದೆಹಲಿ: ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದ ಬಂಗಾಳ ಕೊಲ್ಲಿಯಲ್ಲಿ ಪನಾಮ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ.
ಹಡಗಿನಲ್ಲಿ 24 ಮಂದಿ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ. ಒಡಿಶಾದಿಂದ ಕಬ್ಬಿಣದ ಅದಿರನ್ನು ಸಿಂಗಪುರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಭಾರತೀಯ ಕರಾವಳಿ ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆಯು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಎಂವಿ ಓಷನ್ ವಿನ್ನರ್' (IMO 9145530) ಎಂಬ ಸರಕು ಸಾಗಣೆ ಹಡಗಿನಲ್ಲಿ 20 ಚೀನಿಯರು, ಮ್ಯಾನ್ಮಾರ್‌ನ ಮೂವರು ಹಾಗೂ ಬಾಂಗ್ಲಾದ ಒಬ್ಬ ಪ್ರಜೆ ಸೇರಿದಂತೆ ಒಟ್ಟು 24 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು' ಎಂದು ಐಸಿಜಿ ವಕ್ತಾರರು ತಿಳಿಸಿದ್ದಾರೆ.
'ಶ್ರೀ ವಿಜಯಪುರಂನಲ್ಲಿರುವ ಐಸಿಜಿಯ ಕಡಲ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಶನಿವಾರ ಬೆಳಿಗ್ಗೆ 11:48ಕ್ಕೆ ಹಡಗು ಮುಳುಗಡೆಯಾಗಿರುವ ಬಗ್ಗೆ ಕಂಪನಿಯಿಂದ ಮಾಹಿತಿ ಬಂದಿತ್ತು. 24 ಸಿಬ್ಬಂದಿ ಹೊಂದಿರುವ 'ಎಂವಿ ಓಷನ್ ವಿನ್ನರ್' ಹಡಗು ಸಂಪರ್ಕ ಕಳೆದುಕೊಂಡಿದ್ದು, ರಕ್ಷಣಾ ನೆರವು ನೀಡುವಂತೆ ಮನವಿ ಮಾಡಲಾಗಿತ್ತು' ಎಂದು ಐಸಿಜಿ ವಕ್ತಾರರು ಹೇಳಿದ್ದಾರೆ.
ಎಂಆರ್‌ಸಿಸಿ ಸಮೀಪದಲ್ಲಿದ್ದ 'ಎಂಟಿ ಐಸೊಪೋಸ್' ವಾಣಿಜ್ಯ ಹಡಗನ್ನು ಕೂಡಲೇ ಅಪಘಾತಕ್ಕೊಳಗಾದ ಸ್ಥಳಕ್ಕೆ ತಿರುಗಿಸಲಾಯಿತು. ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ' ಎಂದೂ ಅವರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ಐಸಿಜಿ ಹಡಗುಗಳಾದ 'ವರದ್' ಮತ್ತು 'ಅನ್ಮೋಲ್' ಅನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಶ್ರೀ ವಿಜಯಪುರಂನಿಂದ 'ವಿಜಿತ್' ಹಡಗನ್ನೂ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

