ಲಖನೌ (PTI): ರಾಮಮಂದಿರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಂದಿರ ನಿರ್ಮಾಣ ಕುರಿತು ಬರೆದಿದ್ದರು ಎನ್ನಲಾದ ಪತ್ರವೊಂದು ಉತ್ತರಪ್ರದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
'ರಾಮಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು.
ಅವರ ಆಯ್ಕೆಯ ವ್ಯಕ್ತಿಗಳೇ ಸಮಿತಿಯಲ್ಲಿದ್ದರು. ಆರು ವರ್ಷದಲ್ಲಿ ಈ ವ್ಯಕ್ತಿಗಳು ಅಯೋಧ್ಯೆಗೆ ಬಂದಿದ್ದು ಒಂದೆರಡು ಬಾರಿ' ಎಂಬ ಅಂಶ ಇರುವ ಪತ್ರ ಗುರುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
'ಜಸ್ ಕ ತಸ್' ( ಹೇಗಿತ್ತೊ ಹಾಗೆ) ಪುಸ್ತಕದಲ್ಲಿ ಪತ್ರದ ಉಲ್ಲೇಖ ಇದೆ. ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರದ ಬೆಳವಣಿಗೆಗಳನ್ನು ರಾಯ್ ಹಂಚಿಕೊಂಡಿದ್ದಾರೆ. ದೇಗುಲ ನಿರ್ಮಾಣ ಕಂಪನಿ, ವಿನ್ಯಾಸಕಾರರನ್ನೂ ಮಿಶ್ರಾ ಅವರೇ ನಿರ್ಧರಿಸಿದರು. ಕೆಲವರ ಸಲಹೆ, ಅಭಿಪ್ರಾಯಕ್ಕೆ ಮನ್ನಣೆ ಸಿಗಲಿಲ್ಲ' ಎಂದು ರಾಯ್ ವಿವರಿಸಿದ್ದಾರೆ ಎಂದು ವರದಿಯಾಗಿದೆ.
ದೇಣಿಗೆ ಕಳವು ವಿವಾದ ಭುಗಿಲೆದ್ದಾಗ ಚಂಪತ್ ರಾಯ್ ರಾಜೀನಾಮೆ ನೀಡಿದ್ದರು. ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ ) ಇತ್ತೀಚೆಗೆ ರಾಯ್ ನಿರ್ದೋಷಿ ಎಂದಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಡಿ ರಚಿಸಿರುವ ಮತ್ತೊಂದು ಎಸ್ಐಟಿ ಇನ್ನೂ ತನಿಖೆ ನಡೆಸುತ್ತಿದೆ.
ಶುಕ್ರವಾರ ಅಯೋಧ್ಯೆಯಲ್ಲೇ ಇದ್ದ ನೃಪೇಂದ್ರ ಮಿಶ್ರಾ ಅವರು ರಾಯ್ ಪತ್ರ ಕುರಿತ ಪ್ರಶ್ನೆಗೆ 'ನಾನು ಇನ್ನೂ ಅದ್ಯಾವುದನ್ನು ನೋಡಿಲ್ಲ' ಎಂದಷ್ಟೇ ಹೇಳಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ಮಿಶ್ರಾ ಅವರೇ ಜೂನ್ನಲ್ಲಿ ದೇಣಿಗೆ ಕಳವು ವಿಚಾರ ಹೊರಬಿದ್ದಾಗ ಉನ್ನತ ಮಟ್ಟದ ತನಿಖೆಗೆ ಆಗ್ರಹ ಮಾಡಿದ್ದರು.
ಸಂಜೀವ್ ಕುಮಾರ್ ಸಿಂಗ್, ಅಂತರರಾಷ್ಟ್ರೀಯ ರಾಮಕಥಾ ಮ್ಯೂಸಿಯಂ ನಿರ್ವಾಹಕ ಪುಸ್ತಕದ ಶೀರ್ಷಿಕೆಗೆ ನಾನು ಸಲಹೆ ನೀಡಿದ್ದೆ. ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವಂತೆ ರಾಯ್ ಪತ್ರ ಬರೆದಿರಲಿಲ್ಲ. ಇದು ಪುಸ್ತಕದ ಆಯ್ದ ಭಾಗವಷ್ಟೆ - ಅಯೋಧ್ಯೆ (ಪಿಟಿಐ): ದೇಣಿಗೆ ಕಳವು ಪ್ರಕರಣದಲ್ಲಿ ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಅಧಿಕಾರಿ ಗೋಪಾಲ್ ರಾವ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಫೈಜಾಬಾದ್ ವಕೀಲರ ಸಂಘ ಆಗ್ರಹಿಸಿದೆ. ಅಧ್ಯಕ್ಷ ಕಾಳಿಕಾ ಪ್ರಸಾದ್ ಮಿಶ್ರಾ ನೇತೃತ್ವದಲ್ಲಿ ಶನಿವಾರ ನಡೆದ ವಕೀಲರ ಸಂಘದ ಸಾಮಾನ್ಯ ಸಭೆ ಈ ನಿರ್ಣಯ ಕೈಗೊಂಡಿದೆ. ನಿರ್ದೋಷಿ ಎಂದು ಹೇಳುವ ಮೂಲಕ ಸರ್ಕಾರ ಇವರನ್ನು ರಕ್ಷಿಸಲು ಹೊರಟಿದೆ. ಎಫ್ಐಆರ್ ದಾಖಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.

