ಮುಂಬೈ: ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಈ ಕಾರ್ಯಕ್ರಮದಲ್ಲಿ ಸಿಜೆಐ ಸೂರ್ಯ ಕಾಂತ್ ಅವರು ಭಾಗವಹಿಸಬೇಕಿತ್ತು. ಆದರೆ, ವಿದ್ಯಾರ್ಥಿಗಳ ಪ್ರತಿಭಟನೆಯ ಭೀತಿಯಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 2ರ ರವಿವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು "ಅನಿರೀಕ್ಷಿತ ಕಾರಣಗಳಿಂದ" ಮುಂದೂಡಲಾಗಿದೆ ಎಂದು ಗುರುವಾರ ಮಧ್ಯರಾತ್ರಿ ವಿದ್ಯಾರ್ಥಿಗಳಿಗೆ ಕಳುಹಿಸಿದ ಇ-ಮೇಲ್‌ನಲ್ಲಿ TISS ತಿಳಿಸಿದೆ.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮುಖ್ಯ ಅತಿಥಿಯಾಗಿ ಮತ್ತು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಅತಿಥಿಯಾಗಿ ಭಾಗವಹಿಸಬೇಕಿತ್ತು.
ಸಂಸ್ಥೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಕಾರ, ಕ್ಯಾಂಪಸ್ ನಲ್ಲಿನ ಭದ್ರತಾ ಕಳವಳ ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಕುರಿತು ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಘಟಿಕೋತ್ಸವವನ್ನು ಮುಂದೂಡಲಾಗಿದೆ.
ಈ ಬೆಳವಣಿಗೆಯಿಂದ ಮುಂಬೈಗೆ ಈಗಾಗಲೇ ಆಗಮಿಸಿದ್ದ ಮತ್ತು ಪೋಷಕರು ಹಾಗೂ ಸಂಬಂಧಿಕರೊಂದಿಗೆ ನಗರಕ್ಕೆ ಬರುತ್ತಿದ್ದ ನೂರಾರು ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಪ್ರಯಾಣ ಹಾಗೂ ಮುಂಬೈನಲ್ಲಿ ವಸತಿ ವ್ಯವಸ್ಥೆಗಾಗಿ ಖರ್ಚು ಮಾಡಿದ ಹಣ ವ್ಯರ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಒಬ್ಬ ವಿದ್ಯಾರ್ಥಿ ಮಾತನಾಡಿ, "ನಾನು ಕೆಲಸದ ನಿಮಿತ್ತ ಮುಂಬೈನಲ್ಲೇ ಇದ್ದೆ. ಆದರೆ, ನನ್ನ ಪೋಷಕರು ಊರಿನಿಂದ ಇಲ್ಲಿಗೆ ಬಂದಿದ್ದರು. ಪ್ರಯಾಣ ಮತ್ತು ವಸತಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು. ಇದು ನಮಗೆ ಬಹಳ ವಿಶೇಷವಾದ ದಿನವಾಗಿತ್ತು. ಟಿಐಎಸ್‌ಎಸ್ ಒಂದು ಪ್ರತಿಷ್ಠಿತ ಸಂಸ್ಥೆ. ಇಲ್ಲಿ ಪ್ರವೇಶ ಪಡೆಯುವುದು ಮತ್ತು ಪದವಿ ಪಡೆಯುವುದು ನಮ್ಮ ಪಾಲಿಗೆ ಒಂದು ಹೆಮ್ಮೆಯಾಗಿತ್ತು. ಘಟಿಕೋತ್ಸವ ಸಮಾರಂಭಕ್ಕಾಗಿ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೆವು. ಆದರೆ ಸಂಸ್ಥೆ ಏಕಾಏಕಿ ಕಾರ್ಯಕ್ರಮವನ್ನು ಮುಂದೂಡಿದೆ" ಎಂದು ಹೇಳಿದರು.

