ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಮೆರಿಕ ಪ್ರವಾಸಕ್ಕೂ ಮುನ್ನ, ಆರ್‌ಎಸ್‌ಎಸ್ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕ ಆಯೋಗ(ಯುಎಸ್‌ಸಿಐಆರ್‌ಎಫ್) ತಿಳಿಸಿದೆ.
ಅಲ್ಲದೆ, ಮೋಹನ್ ಭಾಗವತ್ ಅವರಿಗೆ ರಾಜತಾಂತ್ರಿಕ ಮರ್ಯಾದೆಗಳನ್ನು ನೀಡುವುದಾಗಲಿ, ಅವರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸುವುದಾಗಲಿ ಮಾಡಬಾರದು ಎಂದು ಟ್ರಂಪ್ ಸರ್ಕಾರಕ್ಕೆ ಮನವಿ ಮಾಡಿದೆ.
ನ್ಯೂಯಾರ್ಕ್‌ನಲ್ಲಿ ಆಗಸ್ಟ್ 29 ರಂದು 'ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್' ಆಯೋಜಿಸಿರುವ 'ಯುನಿವರ್ಸಲ್ ಒನ್ನೆಸ್ ಸೆಲೆಬ್ರೆಷನ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.
ಆಯೋಗದ ಅಧ್ಯಕ್ಷ ಆಸಿಫ್ ಮಹಮೂದ್ ಮಾತನಾಡಿ, 'ಆರ್‌ಎಸ್‌ಎಸ್ ಒಂದು ಪ್ರಮುಖ ಸಂಘಟನೆಯಾಗಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಘಟನೆಯ ಸದಸ್ಯರಾಗಿದ್ದಾರೆ. ಆದರೆ, ಅದರ ಉಪ ಗುಂಪುಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸಿವೆ' ಎಂದು ಆರೋಪಿಸಿದ್ದಾರೆ.
ಮಾರ್ಚ್‌ನಲ್ಲಿ ಪ್ರಕಟವಾದ ಆಯೋಗದ ವಾರ್ಷಿಕ ವರದಿಯಲ್ಲಿ, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯ ಆರೋಪಗಳಿಗಾಗಿ ಭಾರತವನ್ನು ಟೀಕಿಸಲಾಗಿತ್ತು.

