ಹೈದರಾಬಾದ್ (PTI): ಆರೋಗ್ಯ ಕಾಳಜಿ, ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮತ್ತು ಮಹಿಳಾ ಸಬಲೀಕರಣದ ಕುರಿತ ಜಾಗೃತಿಗಾಗಿ ಓಟ 'ಪಿಂಕ್ ಪವರ್ ರನ್'ನ ಮೂರನೇ ಆವೃತ್ತಿಯು ಭಾನುವಾರ ಹೈದರಾಬಾದ್‌ನಲ್ಲಿ ನಡೆಯಿತು. ಸುಮಾರು 35 ಸಾವಿರ ಜನರು ಓಟದಲ್ಲಿ ಭಾಗಿಯಾಗಿದ್ದರು.
ಮೇಘಾ ಎಂಜಿನಿಯರಿಂಗ್ ಆಯಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್(ಎಂಇಐಲ್) ಮತ್ತು ಸುಧಾರೆಡ್ಡಿ ಫೌಂಡೇಷನ್ ಈ ಓಟವನ್ನು ಆಯೋಜಿಸಿತ್ತು.
ತೆಲಂಗಾಣ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆ ಡಾ.ಅನಸೂಯ, ಡಿಜಿಪಿ ವಿ.ಸಿ ಆನಂದ್, ಎಂಇಐಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪಿ.ವಿ ಕೃಷ್ಣ ರೆಡ್ಡಿ, ಸುಧಾರೆಡ್ಡಿ ಫೌಂಡೇಷನ್ ಸಂಸ್ಥಾಪಕಿ ಸುಧಾರೆಡ್ಡಿ, ಮಾಜಿ ವಿಶ್ವಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ, ಬಾಕ್ಸರ್ ವಿಜೇಂದರ್ ಸಿಂಗ್ ಪಾಲ್ಗೊಂಡಿದ್ದರು.
21 ಕಿ.ಮೀ ಹಾಫ್ ಮ್ಯಾರಥಾನ್‌ನಲ್ಲಿ ಸುನೀಲ್ ಕುಮಾರ್ (ಪುರುಷರ ವಿಭಾಗ) ಮತ್ತು ಸೋನಮ್(ಮಹಿಳಾ ವಿಭಾಗ) ವಿಜೇತರಾದರು. 10 ಕಿ.ಮೀ ಓಟದಲ್ಲಿ ಹರೀಶ್ ಷರೀನ್(ಪುರುಷರ ವಿಭಾಗ) ಮತ್ತು ವಂದನಾ ಪಟೇಲ್(ಮಹಿಳಾ ವಿಭಾಗ), 5 ಕಿ.ಮೀ ಓಟದಲ್ಲಿ ಲವ್ ಚೌಧರಿ(ಪುರುಷರ ವಿಭಾಗ) ಮತ್ತು ಅಂಜಲಿ(ಮಹಿಳಾ ವಿಭಾಗ) ಪ್ರಶಸ್ತಿ ಪಡೆದರು.
5 ವರ್ಷದ ಮಕ್ಕಳಿಂದ 80 ವರ್ಷಕ್ಕೂ ಅಧಿಕ ವಯಸ್ಸಿನ ವೃದ್ಧರು ಮತ್ತು ಅಂಗವಿಕಲರು ಸಹ ಭಾಗಿಯಾಗಿದ್ದರು.
ತಮ್ಮ ಮಕ್ಕಳ ಶಿಕ್ಷಣಕ್ಕಾಗಿ 5 ಕಿ.ಮೀ ದೂರ ಬರಿಗಾಲಿನಲ್ಲಿ ನಡೆಯುವ ಮೂಲಕ ಸುದ್ದಿಯಾಗಿದ್ದ ಮಹಾರಾಷ್ಟ್ರದ ಮಹಿಳೆ ರಮಾಭಾಯಿ ರಣವೀರ್(47) ಕೂಡಾ ಓಟದಲ್ಲಿ ಭಾಗವಹಿಸಿ ಗಮನಸೆಳೆದರು.

