ಗುವಾಹಟಿ (PTI): 'ಯಾವುದೇ ಕಾರಣ ನೀಡದೆ, ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಮುಖಂಡ ಅಶುತೋಷ್ ರಾಂಕಾ ಹಾಗೂ 40 ಸ್ವಯಂಸೇವಕರನ್ನು ಅಸ್ಸಾಂನ ಗುವಾಹಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ' ಎಂದು ಸಿಜೆಪಿ ಆರೋಪಿಸಿದೆ.
'ರಾಂಕಾ ಸೇರಿದಂತೆ ಉಳಿದವರನ್ನು ತಕ್ಷಣವೇ ಬಿಡುಗಡೆಗೊಳಿಸದಿದ್ದರೆ, ಮತ್ತಷ್ಟು ಸಂಖ್ಯೆಯ ಬೆಂಬಲಿಗರು ಅಸ್ಸಾಂಗೆ ಭೇಟಿ ನೀಡಲಿದ್ದೇವೆ.
ಧೈರ್ಯವಿದ್ದರೆ, ಅಸ್ಸಾಂ ಮುಖ್ಯಮಂತ್ರಿಯವರು ಎಲ್ಲರನ್ನೂ ಬಂಧಿಸಲಿ' ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸವಾಲು ಹಾಕಿದ್ದಾರೆ.
ದಿಸ್ಪುರದ ರಾಜ್ಯ ಸಚಿವಾಲಯದ ಸಮೀಪವಿರುವ ವಿರೋಧ ಪಕ್ಷ ಅಸ್ಸಾಂ ಜಾತೀಯ ಪರಿಷತ್ (ಎಜೆಪಿ) ನಾಯಕ ಕುಂಕಿ ಚೌಧರಿ ಅವರ ನಿವಾಸದಲ್ಲಿ ಸಿಜೆಪಿಯ ಸ್ವಯಂಸೇವಕರನ್ನು ಭೇಟಿ ಮಾಡಲು ರಾಂಕಾ ಅವರು ಗುವಾಹಟಿಗೆ ಬಂದಿದ್ದರು. ಆದರೆ ಸಭೆಯನ್ನು ನಡೆಸಲು ಪೊಲೀಸರು ತಡೆಯೊಡ್ಡಿದ್ದಾರೆ ಎಂದು ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.
'ಅಸ್ಸಾಂ ಪೊಲೀಸರು ರಾಂಕಾ ಹಾಗೂ ಸಿಜೆಪಿ ತಂಡವನ್ನು ವಶಕ್ಕೆ ಪಡೆದು, ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅವರನ್ನು ಬಿಡುಗಡೆಗೊಳಿಸದಿದ್ದರೆ, ಮತ್ತಷ್ಟು ಸದಸ್ಯರು ದೀಪ್ಕೆ ನೇತೃತ್ವದಲ್ಲಿ ಅಲ್ಲಿಗೆ ತೆರಳಿ ಹೋರಾಟ ನಡೆಸಲಾಗುವುದು' ಎಂದು ಸಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಲಾಗಿದೆ.

