ನವದೆಹಲಿ (PTI): ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕು ಎಂಬುದಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಲಿ, ಆ ಬಳಿಕವಷ್ಟೇ ಈ ವಿಚಾರದ ಕುರಿತ ಮೇಲ್ಮನವಿಗಳ ವಿಚಾರಣೆಗೆ ಸೂಕ್ತ ದಿನಾಂಕ ನಿಗದಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವಿಚಾರಣೆ ವೇಳೆ, ಅರ್ಜಿದಾರ ಮಹಿಳೆಯೊಬ್ಬರ ಪರ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, 'ಈ ವಿಚಾರವಾಗಿ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಪ್ರತಿಕ್ರಿಯೆ ಸಲ್ಲಿಸಿಲ್ಲ. ಹೀಗಾಗಿ, ಈ ಕುರಿತ ಅರ್ಜಿಗಳ ವಿಚಾರಣೆಯನ್ನು ನವೆಂಬರ್ನಲ್ಲಿ ನಡೆಸಬೇಕು ಹಾಗೂ ಸೂಕ್ತ ದಿನಾಂಕ ನಿಗದಿ ಮಾಡಬೇಕು' ಎಂದು ಕೋರಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಹಾಗೂ ವಿ.ಮೋಹನಾ ಅವರ ಪೀಠದ ಎದುರು, ಮತ್ತೊಬ್ಬ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲೆ ಕರುಣಾ ನಂದಿ ಅವರೂ ಇದೇ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಅರ್ಜಿಗಳನ್ನು ಬುಧವಾರ ನಡೆಯಲಿರುವ ವಿಚಾರಣೆಯ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಏನು ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಗಮನಿಸಿ, ಸೂಕ್ತ ದಿನಾಂಕ ನಿಗದಿ ಮಾಡಲಾಗುವುದು' ಎಂದು ಹೇಳಿತು.

