ನವದೆಹಲಿ: 'ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ನಿರಂತರ ದಾಳಿ ನಡೆಸುವ ಆರೋಪಿಗಳು ರಸ್ತೆಗಳಲ್ಲಿ ಮುಕ್ತವಾಗಿ ತಿರುಗಾಡಲು ಅರ್ಹರಲ್ಲ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
'ಪರಿಸ್ಥಿತಿಯು ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಇಂತಹ ಕೃತ್ಯಗಳ ವಿರುದ್ಧ ಅತ್ಯಂತ ಕಠಿಣ ಹಾಗೂ ಪ್ರಬಲ ಸಂದೇಶವನ್ನು ಸಮಾಜಕ್ಕೆ ರವಾನಿಸುವ ತುರ್ತು ಅಗತ್ಯವಿದೆ' ಎಂದು ಹೇಳಿದೆ.
ಕಳೆದ ಜುಲೈನಲ್ಲಿ ಮಹಾರಾಷ್ಟ್ರದ ಠಾಣೆಯ ಆಸ್ಪತ್ರೆಯೊಂದರಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಆರೋಪ ಎದುರಿಸುತ್ತಿರುವ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಅವರಿಂದ ಪ್ರತಿಕ್ರಿಯೆ ಕೇಳುವಾಗ, ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಕುರಿತು 3 ವಾರ ದೊಳಗೆ ಪ್ರತಿಕ್ರಿಯೆ ನೀಡುವಂತೆ ಮ್ಹಾತ್ರೆ ಅವರಿಗೆ ಪೀಠವು ನೋಟಿಸ್ ನೀಡಿದೆ.

