HEALTH TIPS

ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್: ನಟಿ ಶ್ರೀಲೇಖಾಗೆ ಕಲ್ಕತ್ತ ಹೈಕೋರ್ಟ್ ತರಾಟೆ

ಕೋಲ್ಕತ್ತ: ಈಚೆಗೆ ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆಕ್ಷೇಪಾರ್ಹ ಕಾರ್ಟೂನ್‌ ಹೊಂದಿರುವ ಪೋಸ್ಟರ್ ಪ್ರದರ್ಶಿಸಿದ್ದಕ್ಕಾಗಿ ಕಲ್ಕತ್ತ ಹೈಕೋರ್ಟ್, ನಟಿ ಶ್ರೀಲೇಖಾ ಮಿತ್ರಾ ಅವರನ್ನು ತರಾಟೆ ತೆಗೆದುಕೊಂಡಿದೆ.


ಪ್ರಧಾನಿ ಕುರಿತು ಆಕ್ಷೇಪಾರ್ಹ ಪೋಸ್ಟರ್ ಪ್ರದರ್ಶಿಸಿದ್ದನ್ನು 'ಅಸಹ್ಯಕರ' ಎಂದು ಕರೆದಿರುವ ಹೈಕೋರ್ಟ್, ಘಟನೆ ಸಂಬಂಧ ಆಘಾತ ವ್ಯಕ್ತಪಡಿಸಿದೆ. ಆದರೆ, ಬಲವಂತದ ಪೊಲೀಸ್ ಕ್ರಮದಿಂದ ಶ್ರೀಲೇಖಾ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆ.

ಜುಲೈ 24ರಂದು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕೋಲ್ಕತ್ತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾರಿ ಪ್ರತಿಭಟನೆಗಳನ್ನು ನಡೆಸಿದ್ದರು.

ಕೋಲ್ಕತ್ತದ ಎಸ್‌ಪ್ಲನೇಡ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀಲೇಖಾ ಭಾಗವಹಿಸಿದ್ದರು. ಮೋದಿ ಕುರಿತಾದ ಕಾರ್ಟೂನ್‌ ಪೋಸ್ಟರ್ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದರು. ಇದನ್ನು ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೀಲೇಖಾ ವಿರುದ್ಧ 16 ಎಫ್‌ಐಆರ್‌ಗಳು ದಾಖಲಾಗಿದ್ದವು.

ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಶ್ರೀಲೇಖಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ವಿಚಾರಣೆ ನಡೆಸಿದ್ದಾರೆ. 'ಇದೊಂದು 'ಅಸಹ್ಯಕರ' ಕೃತ್ಯ. ಕಾರ್ಟೂನ್‌ ಸ್ವರೂಪ ನೋಡಿ ಮನಸ್ಸಿಗೆ ಆಘಾತವಾಯಿತು. ದೇಶದ ಯಾವುದೇ ಪ್ರಜೆ ಈ ರೀತಿ ನಡೆದುಕೊಳ್ಳಬಾರದು' ಎಂದಿದ್ದಾರೆ.

ಶ್ರೀಲೇಖಾ ವಿರುದ್ಧ ಬಾಕಿ ಇರುವ ಎಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ಒಟ್ಟುಗೂಡಿಸಿ, ಕೋಲ್ಕತ್ತದ ಆನಂದಪುರ ಪೊಲೀಸ್ ಠಾಣೆ ವತಿಯಿಂದ ತನಿಖೆ ನಡೆಸುವಂತೆ ಕೋರ್ಟ್ ನಿರ್ದೇಶಿಸಿದೆ.

'ಡಿಸೆಂಬರ್ 24 ರವರೆಗೆ ಕೋರ್ಟ್‌ ಅನುಮತಿಯಿಲ್ಲದೆ ಅರ್ಜಿದಾರರ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಬಾರದು' ಎಂದು ಭಟ್ಟಾಚಾರ್ಯ ಹೇಳಿದ್ದಾರೆ. ಅರ್ಜಿದಾರರು ತನಿಖೆಗೆ ಸಹಕರಿಸಿದರೆ ಮಾತ್ರ ಈ ರಕ್ಷಣೆ ಮುಂದುವರಿಯುತ್ತದೆ ಎಂದೂ ಎಚ್ಚರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಲು ಶ್ರೀಲೇಖಾ ಅವರಿಗೆ 48 ಗಂಟೆಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಡಿಸೆಂಬರ್ 14ರಂದು ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.

ನಟಿಯ ವಿರುದ್ಧ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

'ಕಾರ್ಟೂನ್ ಕೆಟ್ಟ ಅಭಿರುಚಿಯಿಂದ ಕೂಡಿದೆ. ಅದುವೇ ಅಪರಾಧ' ಎಂದು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಾಜ್‌ದೀಪ್ ಮಜುಂದಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries