ಭಾಗಲ್‌ಪುರ: 'ಧರ್ತಿ ಪಕಡ್' ಎಂದೇ ಖ್ಯಾತರಾಗಿದ್ದ ಬಿಹಾರದ ನಗರ್‌ಮಲ್ ಬಜೊರಿಯಾ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದ ಬಜೊರಿಯಾಗೆ 97 ವರ್ಷ ವಯಸ್ಸಾಗಿತ್ತು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಜೊರಿಯಾ, ಪಟ್ನಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾಗಲ್‌ಪುರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಸದ್ಯ ಪಾಕಿಸ್ತಾನದ ಭಾಗವಾಗಿರುವ ಪಶ್ಚಿಮ ಪಂಜಾಬ್‌ನಲ್ಲಿ ಜನಿಸಿದ ಬಜೊರಿಯಾ, ದೇಶ ವಿಭಜನೆ ಬಳಿಕ ಬಿಹಾರಕ್ಕೆ ಬಂದು ನೆಲೆಸಿ, ಜವಳಿ ಉದ್ಯಮದಲ್ಲಿ ತೊಡಗಿದ್ದರು.
'ಚುನಾವಣೆಗಳಿರುವುದು ಅಧಿಕಾರ ಗಳಿಸುವುದಕ್ಕಾಗಿ ಅಲ್ಲ, ಜನರಿಗಾಗಿ ಎಂಬ ಜಾಗೃತಿ ಮೂಡಿಸುವುದಕ್ಕಾಗಿ ಸ್ಪರ್ಧಿಸುತ್ತೇನೆ ಎಂದು ಪ್ರತಿ ಸಲವೂ ಹೇಳುತ್ತಿದ್ದರು. ಅವರು 300ಕ್ಕೂ ಅಧಿಕ ಚುನಾವಣೆಗಳಲ್ಲಿ ಕಣಕ್ಕೆ ಇಳಿದಿದ್ದರು' ಎಂದು ಬಜೋರಿಯಾ ಮೊಮ್ಮಗ ಗೌರವ್ ಹೇಳಿದ್ದಾರೆ.
'ನನ್ನ ತಾತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಲಿಲ್ಲ. 1960ರಲ್ಲಿ ಮೊದಲ ಸಲ ಪುರಸಭೆ ಚುನಾವಣೆಗೆ ನಿಂತಿದ್ದರು. 1969ರಲ್ಲಿ ವಿ.ವಿ. ಗಿರಿ (ಮಾಜಿ ರಾಷ್ಟ್ರಪತಿ) ವಿರುದ್ಧ ನಾಮಪತ್ರ ಸಲ್ಲಿಸಿ ದೇಶದಾದ್ಯಂತ ಸುದ್ದಿಯಾಗಿದ್ದರು' ಎಂದು ಸ್ಮರಿಸಿದ್ದಾರೆ.
2012ರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಅವರ ಕೊನೇ ಚುನಾವಣೆ ಎಂದಿರುವ ಗೌರವ್, 'ಪ್ರತಿ ಸಲ ಸೋತಾಗಲೂ ಚುನಾವಣೆಯಲ್ಲಿ ಸೋಲುತ್ತಿರುವುದು ನಾನಲ್ಲ; ಜನರು ಎಂಬುದು ಅವರ ಮಾತಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಪಟ್ನಾ ಸಾಹಿಬ್ ಮತ್ತು ರಾಯ್ ಬರೇಲಿ ಸೇರಿದಂತೆ ಹಲವೆಡೆ ಕಣಕ್ಕಿಳಿಯಲು ಅವರು ಬಯಸಿದ್ದರು. ಆದರೆ, ಆರೋಗ್ಯ ಕೈಕೊಟ್ಟಿತ್ತು' ಎಂದಿದ್ದಾರೆ.

