HEALTH TIPS

'ಪೆಂಗ್ವಿನ್' ವಿವಾದದ ನಡುವೆಯೂ ಬಿಡುಗಡೆಗೆ ಸಿದ್ಧವಾದ ಸೋನಿಯಾ ಆತ್ಮಕಥೆ

 ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವನ್ನು ಪ್ರಕಟಿಸಲು 'ಹಾರ್ಪರ್ ಕಾಲಿನ್ಸ್ ಇಂಡಿಯಾ' ಪ್ರಕಾಶನ ಸಜ್ಜಾಗಿದೆ. ಸೋನಿಯಾ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಕಾರಣ 'ಪೆಂಗ್ವಿನ್ ಇಂಡಿಯಾ' ಪ್ರಕಾಶನ ಸಂಸ್ಥೆ ಪುಸ್ತಕಯು ಬಿಡುಗಡೆಗೆ ಹಿಂದೇಟು ಹಾಕಿತ್ತು. 


ಸೋನಿಯಾ ಅವರ ಆತ್ಮಕಥನವನ್ನು ತಾನು ಪ್ರಕಟಿಸುತ್ತಿಲ್ಲ ಎಂಬುದಾಗಿ ಪೆಂಗ್ವಿನ್‌ ಇಂಡಿಯಾ ಆಗಸ್ಟ್ 18ರಂದು ಘೋಷಿಸಿತ್ತು.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹಾಗೂ ಭಾರತದ ಕೆಲವು ಪ್ರದೇಶಗಳನ್ನು ಚೀನಾ ಅತಿಕ್ರಮಿಸಿದೆ ಎಂಬ ವಿಚಾರಗಳಿಗೆ ಸಂಬಂಧಿಸಿದ ಕೆಲವು ಭಾಗಗಳನ್ನು ತೆಗೆಯುವಂತೆ ಪೆಂಗ್ವಿನ್‌ ಸೂಚಿಸಿತ್ತು. ಅದಕ್ಕೆ ಕಾಂಗ್ರೆಸ್‌ ನಾಯಕಿ ಸಿದ್ಧರಿರಲಿಲ್ಲ ಎನ್ನಲಾಗಿದೆ.

'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹಾರ್ಪರ್ ಕಾಲಿನ್ಸ್, 'ಬಹುನಿರೀಕ್ಷಿತ ಆತ್ಮಕಥನವು ಭಾರತದಲ್ಲಿ 2026ರ ನವೆಂಬರ್‌ 10ರಂದು ಪ್ರಕಟವಾಗಲಿದೆ. ಇದು ನಮ್ಮ ಕಾಲಘಟ್ಟದ ಅತ್ಯಂತ ಕುತೂಹಲಕಾರಿ ರಾಜಕೀಯ ಆತ್ಮಕಥನಗಳಲ್ಲಿ ಒಂದು. ಪ್ರೀತಿ, ವ್ಯಕ್ತಿತ್ವ, ಕರ್ತವ್ಯ ಮತ್ತು ಸಂಬಂಧದ ವಿಚಾರಗಳನ್ನೊಳಗೊಂಡ ವೈಯಕ್ತಿಕ ಹಾಗೂ ಕೌತುಕದ ಕಥೆ ಇದಾಗಿದೆ. ಭಾರತ ಕುರಿತ ಒಳನೋಟವನ್ನೂ ನೀಡುತ್ತದೆ' ಎಂದು ಹೇಳಿದೆ.‌

'ಈ ಪುಸ್ತಕವು ಒಟ್ಟು 544 ಪುಟಗಳನ್ನು ಒಳಗೊಂಡಿದ್ದು, ನಾಟಕೀಯ ಹಾಗೂ ಮಹಾಕಾವ್ಯದಂತಿದ್ದರೂ ಆಪ್ತವಾಗಿರುವ ಈ ಕಥನವು ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸ ಮತ್ತು ಪ್ರಸ್ತುತದ ರಾಜಕೀಯ ಹೋರಾಟಗಳ ಬಗ್ಗೆ ವಿಶಿಷ್ಟ ನೋಟ ನೀಡುತ್ತದೆ. ಕಳೆದ 60 ವರ್ಷಗಳಲ್ಲಿ ದೇಶ ಕಂಡ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳ ಒಳನೋಟವನ್ನು ನೀಡುತ್ತದೆ' ಎಂದು ಬಣ್ಣಿಸಿದೆ.

1965ರಲ್ಲಿ ಕೇಂಬ್ರಿಡ್ಜ್‌ನಲ್ಲಿ 19 ವರ್ಷದ ಯುವತಿಯೊಬ್ಬರು ಸುಂದರ ಯುವಕನ ಪ್ರೇಮದ ಬಲೆಯಲ್ಲಿ ಬೀಳುವುದರೊಂದಿಗೆ ಆತ್ಮಕಥನ ಆರಂಭವಾಗುತ್ತದೆ. ಯುದ್ಧಾನಂತರದ ಕಾಲದಲ್ಲಿ ಇಟಲಿಯಲ್ಲಿ ಕಳೆದ ಬಾಲ್ಯ, ಭಾರತಕ್ಕೆ ಕರೆ ತಂದ ಪ್ರೇಮಕಥೆ, ತಮ್ಮ ಭವಿಷ್ಯವನ್ನಷ್ಟೇ ಅಲ್ಲದೆ ತಾವಿದ್ದ ದೇಶದ ಭವಿಷ್ಯವನ್ನೂ ಬದಲಿಸಿದ ದುರಂತಗಳ ಬಗ್ಗೆಯೂ ಸೋನಿಯಾ ಬರೆದಿದ್ದಾರೆ.

ಗಾಂಧಿ ಕುಟುಂಬ ಎದುರಿಸಿದ ಸಂಕಷ್ಟಗಳು, ರಾಜಕೀಯ ಪ್ರವೇಶಿಸಬೇಕಾದ ಒತ್ತಡದ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ ಎಂಬಿತ್ಯಾದಿ ಅಂಶಗಳನ್ನು ವಿವರಿಸಿದ್ದಾರೆ. ಖಾಸಗಿ ಬದುಕಿನ ಸುಖ-ದುಃಖಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ವ್ಯಕ್ತಿತ್ವ, ಕರ್ತವ್ಯ ಮತ್ತು ತಾಯ್ನಾಡಿನ ಅರ್ಥದ ಬಗ್ಗೆ ತಾವು ಹೊಂದಿರುವ ದೃಷ್ಟಿಕೋನವನ್ನು ಬಿಚ್ಚಿಟ್ಟಿದ್ದಾರೆ ಎಂದು ಹಾರ್ಪರ್‌ ತಿಳಿಸಿದೆ.

ಜಾಗತಿಕ ಪ್ರಕಾಶನ ಸಂಸ್ಥೆಯಾಗಿರುವ 'ಪೆಂಗ್ವಿನ್ ರಾಂಡಮ್ ಹೌಸ್‌'ನ ಅಂಗಸಂಸ್ಥೆಯಾದ ಆಲ್ಫ್ರೆಡ್ ಎ ನಾಫ್, ಈ ಪುಸ್ತಕವನ್ನು ವಿಶ್ವದ ಹಲವೆಡೆ ಆಗಸ್ಟ್ 18ರಂದೇ ಬಿಡುಗಡೆ ಮಾಡುವುದಾಗಿ ಹೇಳಿತ್ತು. ವಿದೇಶಗಳಲ್ಲಿ ಯಥಾವತ್ತಾಗಿ ಪ್ರಕಟಿಸಿ, ಭಾರತದಲ್ಲಿ ಮಾತ್ರ ಕೆಲವು ಬದಲಾವಣೆ ಮಾಡುವುದಾಗಿ ಹೇಳಿತ್ತು. ಆದರೆ, ಆ ದ್ವಂದ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಭಾರತದಲ್ಲಷ್ಟೇ ಬದಲಾವಣೆ ಮಾಡಿದರೆ ಒಂದೇ ಪುಸ್ತಕವು ಎರಡು ಆವೃತ್ತಿಗಳಾಗಿ ಉಳಿಯುತ್ತದೆ ಎಂಬ ಕಾರಣಕ್ಕೆ ಸೋನಿಯಾ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅಷ್ಟಲ್ಲದೆ, ಪೆಂಗ್ವಿನ್‌ ಪ್ರಕಾಶನವು ಈ ಹಿಂದೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆಗಳು ವ್ಯಕ್ತವಾದ ನಂತರ ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದ ಹಾಗೂ ಪುಸ್ತಕಗಳನ್ನು ಹಿಂಪಡೆದ ಉದಾಹರಣೆಗಳೂ ಇವೆ ಎಂಬ ಆರೋಪ ಕೇಳಿ ಬಂದಿದ್ದವು.

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಆತ್ಮಚರಿತ್ರೆಯನ್ನು ಮುದ್ರಿಸಿಲ್ಲ ಎಂದು ಪೆಂಗ್ವಿನ್ ಈ ವರ್ಷದ ಆರಂಭದಲ್ಲಿ ಹೇಳಿತ್ತು. ಮುಜಾಫರ್ ನಗರ ಗಲಭೆ ಕುರಿತ ವಿಚಾರಗಳನ್ನು ಒಳಗೊಂಡ ಜೋ ಸಾಕೊ ಅವರ 'ದಿ ಒನ್ಸ್ ಅಂಡ್ ಫ್ಯೂಚರ್ ರಿಯೋಟ್ಸ್‌' ಪುಸ್ತಕ ಪ್ರಕಟಣೆಯಿಂದಲೂ ಹಿಂದೆ ಸರಿದಿತ್ತು. ಆ ಪುಸ್ತಕವನ್ನು ಈಗ ಲೆಫ್ಟ್ ವರ್ಡ್ ಬುಕ್ಸ್ ಪ್ರಕಟಿಸಲಿದೆ. ಈ ಹಿಂದೆ ವೆಂಡಿ ಡೊನಿಗರ್ ಅವರ 'ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ' ಪುಸ್ತಕವನ್ನೂ ಹಿಂಪಡೆದಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries