ನವದೆಹಲಿ: ಆಗಸ್ಟ್ 4 ರಂದು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು (AI-2379) ದಿಢೀರನೆ 300 ಅಡಿಗಳಷ್ಟು ಕೆಳಗೆ ಕುಸಿದು, 24 ಪ್ರಯಾಣಿಕರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಬಿಡುಗಡೆ ಮಾಡಿದೆ.
'ಮುಖ್ಯ ಪೈಲಟ್ ಗಾಂಜಾ ಸೇವಿಸಿದ್ದರು ಎಂಬುದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿತ್ತು. ದೃಢೀಕರಣಕ್ಕಾಗಿ ನಿಗದಿತ ಪ್ರಯೋಗಾಲಯಕ್ಕೆ ಮಾದರಿಗಳನ್ನು ರವಾನಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಮುಖ್ಯ ಪೈಲಟ್ ಮಾದಕದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ (DGCA) ಈ ಕೂಡಲೇ ಆದ್ಯತೆಯ ಮೇರೆಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಎಐಬಿ ಶಿಫಾರಸು ಮಾಡಿದೆ.
ಟರ್ಬುಲೆನ್ಸ್ ಉಂಟಾದ ಕಾರಣಕ್ಕೆ ವಿಮಾನವು ಕೆಳಕ್ಕೆ ಕುಸಿದಿತ್ತು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ತನಿಖೆಯಲ್ಲಿ ವಿಮಾನದ ಎಲ್ಲಾ ಮೂರೂ (ಗ್ರೀನ್, ಬ್ಲೂ, ಯೆಲ್ಲೋ) ಹೈಡ್ರಾಲಿಕ್ ಸಿಸ್ಟಮ್‌ಗಳಲ್ಲಿ ಒಮ್ಮೆಲೇ ಒತ್ತಡ ಕಡಿಮೆಯಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದಾಗಿ 'ಆಟೋ-ಪೈಲಟ್' ತಾನಾಗಿಯೇ ಬಂದ್ ಆಗಿ ವಿಮಾನವು ದಿಢೀರನೆ 300 ಅಡಿ ಕೆಳಗೆ ಕುಸಿದಿತ್ತು. ಬಳಿಕ ದೆಹಲಿ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತ್ತು.
ವಿಮಾನದಲ್ಲಿ ಒಟ್ಟು 137 ಮಂದಿ ಪ್ರಯಾಣಿಕರಿದ್ದರು. ಕೆಲವು ಪ್ರಯಾಣಿಕರಿಗೆ ಮತ್ತು ಕೆಲವು ವಿಮಾನ ಸಿಬ್ಬಂದಿಗೆ ಗಾಯಗಳಾಗಿದ್ದವು.

