ನವದೆಹಲಿ(PTI): ಸಂಸ್ಥೆಯ ಕೆಲ ಕಾರ್ಯಗಳನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸುವ ಪ್ರಸ್ತಾವದ ಬಗ್ಗೆ ಅಧಿಕೃತವಾಗಿ ಸ್ಪಷ್ಟೀಕರಣ ನೀಡುವಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ನೌಕರರ ಒಂಬತ್ತು ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಸಂಘಟನೆಗಳು ಸೆ.4ರಂದು ಇಸ್ರೊ ಮುಖ್ಯಸ್ಥ ವಿ.ನಾರಾಯಣನ್ ಅವರಿಗೆ ಪತ್ರ ಬರೆದಿವೆ.
'ಇಸ್ರೊದ ಉತ್ಪಾದನೆ ಮತ್ತು ಕಾರ್ಯಾಚರಣೆ ವಿಭಾಗಗಳನ್ನು ಖಾಸಗಿಯವರಿಗೆ ವರ್ಗಾಯಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ. ಇಂತಹ ಕ್ರಮಗಳಿಂದ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಂಸ್ಥೆ ವಹಿಸಲಿರುವ ಪಾತ್ರ, ಹಾಲಿ ನೌಕರರ ಮೇಲೆ ಆಗುವ ಪರಿಣಾಮಗಳ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ' ಎಂದು ಸಂಘಟನೆಗಳು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿವೆ.
'ಇಸ್ರೊ ಕೈಗೊಳ್ಳುವ ವಾಣಿಜ್ಯ ಉದ್ದೇಶದ ನಿರ್ದಿಷ್ಟ ಚಟುವಟಿಕೆಗಳಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆಯನ್ನು ಒಪ್ಪಬಹುದು. ಆದರೆ, ವಿವಿಧ ರಾಕೆಟ್‌ಗಳು, ಗಗನನೌಕೆಗಳ ಉಡ್ಡಯನಕ್ಕೆ ಅಭಿವೃದ್ಧಿಪಡಿಸಿರುವ ಮೂಲಸೌಕರ್ಯಗಳನ್ನು ಖಾಸಗಿಯವರಿಗೆ ನೀಡುವುದನ್ನು ಒಪ್ಪಲು ಸಾಧ್ಯ ಇಲ್ಲ' ಎಂದು ಪತ್ರದಲ್ಲಿ ಹೇಳಲಾಗಿದೆ.
'ಇಂತಹ ಮಹತ್ವದ ವಿಚಾರ ಕುರಿತು ಯಾವುದೇ ಚರ್ಚೆ ನಡೆಸದೇ ತೀರ್ಮಾನ ಕೈಗೊಂಡಲ್ಲಿ, ಇಸ್ರೊ ಕಾರ್ಯವು ಕೇವಲ ಸಂಶೋಧನೆ ಮತ್ತು ಅಭಿವೃದ್ಧಿಗೆ(ಆರ್ ಆಯಂಡ್ ಡಿ) ಸೀಮಿತವಾಗಲಿದೆ' ಎಂದೂ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಕೆಲ ಕಾರ್ಯಾಚರಣೆಗಳನ್ನು ಖಾಸಗಿಯವರಿಗೆ ವಹಿಸುವ ಪ್ರಸ್ತಾವ ಕುರಿತು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕಾರ ಕೇಂದ್ರದ (ಇನ್-ಸ್ಪೇಸ್) ಅಧ್ಯಕ್ಷ ಪವನ್ ಗೋಯೇಂಕಾ ಅವರು ಆಗಸ್ಟ್ 21ರಂದು ನೀಡಿದ್ದ ಹೇಳಿಕೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಇಸ್ರೊ, 'ಇನ್-ಸ್ಪೇಸ್' ಸ್ಥಾಪಿಸಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಗೋಯೆಂಕಾ,'ಬರುವ ದಿನಗಳಲ್ಲಿ ಇಸ್ರೊ ಉಪಗ್ರಹ ಉಡ್ಡಯನ ವಾಹನಗಳನ್ನು ತಯಾರಿಸುವುದಿಲ್ಲ. ಖಾಸಗಿ ವಲಯದ ಕಂಪನಿಗಳು ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳು(ಪಿಎಸ್‌ಯು) ಈ ಕಾರ್ಯ ಮಾಡಲಿವೆ' ಎಂದು ಹೇಳಿದ್ದರು ಎನ್ನಲಾಗಿದೆ.
'ಈ ಹೇಳಿಕೆ ಕುರಿತಂತೆ ಬಾಹ್ಯಾಕಾಶ ಇಲಾಖೆಯಿಂದ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಉದ್ದೇಶಿತ ಖಾಸಗೀಕರಣಕ್ಕೆ ಸಂಬಂಧಿಸಿದ ನೀತಿ, ಅದು ಒಳಗೊಂಡಿರುವ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆಯೂ ಇಲಾಖೆ ತಿಳಿಸಿಲ್ಲ. ಸಂಸ್ಥೆಯ ನೌಕರರನ್ನು ಹಂತಹಂತವಾಗಿ ತೆಗೆದು ಹಾಕಲಾಗುತ್ತದೆಯೇ? ನೌಕರರ ಮೇಲಾಗುವ ಪರಿಣಾಮಗಳೇನು? ಹಾಗೂ ಭವಿಷ್ಯದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ ಎಂಬಂತಹ ವಿಚಾರಗಳ ಬಗ್ಗೆ ಕೂಡ ಇಲಾಖೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ' ಎಂದು ನೌಕರರ ಸಂಘಟನೆಗಳು ಹೇಳಿವೆ.
ಉದ್ಯೋಗಿಗಳ ಕಳವಳ
* ಇಸ್ರೊ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ರಾಷ್ಟ್ರೀಯ ಸ್ವತ್ತು. ಇವುಗಳ ವರ್ಗಾವಣೆ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕಲ್ಲದೇ, ಉತ್ತರದಾಯಿತ್ವವೂ ಇರಬೇಕು
* ಪಿಎಸ್‌ಎಲ್‌ವಿ, ಎಲ್‌ವಿಎಂ3, ಎಸ್‌ಎಸ್‌ಎಲ್‌ವಿಯಂತಹ ರಾಕೆಟ್‌ಗಳ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆಯಂತಹ ಕಾರ್ಯಾಚರಣೆಗಳನ್ನು ಇಸ್ರೊ ಮುಂದುವರಿಸಲಿದೆಯೇ ಅಥವಾ ನಿಲ್ಲಿಸಲಿದೆಯೇ?
* ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಮಂಜೂರಾದ ಹುದ್ದೆಗಳ ಮೇಲೆ ಏನು ಪರಿಣಾಮ ಆಗಲಿದೆ. ಇಸ್ರೊದ ವಿವಿಧ ಕೇಂದ್ರಗಳಲ್ಲಿ ವೈಜ್ಞಾನಿಕ/ತಾಂತ್ರಿಕ/ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಹೇಗಿರಲಿದೆ?
ಗುರಿ ಸಾಧನೆಗೆ ಒಗ್ಗಟ್ಟಿನ ಕೆಲಸ ಅಗತ್ಯ: ಗೋಯೆಂಕಾ
ಒಂದೆಡೆ, ಇಸ್ರೊದ ಕೆಲ ಕಾರ್ಯಾಚರಣೆಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ ಎಂಬ ಕುರಿತು ಚರ್ಚೆ ನಡೆಯುತ್ತಿದ್ದರೆ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಗುರಿ ಸಾಧನೆಗೆ ಇಸ್ರೊ ಮತ್ತು ಖಾಸಗಿ ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ ಅವರು 'ಎಕ್ಸ್'ನಲ್ಲಿ ಭಾನುವಾರ ಬರೆದುಕೊಂಡಿದ್ದಾರೆ.
'2030ರ ವೇಳೆಗೆ, ಪ್ರತಿ ವರ್ಷ 50 ಉಡ್ಡಯನಗಳನ್ನು ಕೈಗೊಳ್ಳಬೇಕು ಎಂಬ ಗುರಿ ಸಾಧನೆಗೆ ಒಟ್ಟಿಗೇ ಕೆಲಸ ಮಾಡುವುದು ಅಗತ್ಯ. ಒಂದೇ ಸಂಘಟನೆಯಿಂದ ಇಂತಹ ಬೃಹತ್ ಗುರಿ ಸಾಧನೆ ಸಾಧ್ಯ ಇಲ್ಲ' ಎಂದು ಹೇಳಿದ್ದಾರೆ.
'ಖಾಸಗಿ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ರಾಕೆಟ್‌ಗಳು, ಉಪಗ್ರಹಗಳನ್ನು ತಯಾರಿಸಬೇಕು. ಉಡ್ಡಯನ ಸಾಮರ್ಥ್ಯ ವೃದ್ಧಿಸಬೇಕು ಹಾಗೂ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು' ಎಂದು ಗೋಯೆಂಕಾ ಪ್ರತಿಪಾದಿಸಿದ್ದಾರೆ.
ಉದ್ದೇಶಪೂರ್ವಕ ನಿರ್ಬಂಧ: ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್) ಉತ್ತೇಜನ ನೀಡುವ ಹೆಸರಿನಲ್ಲಿ ಇಸ್ರೊದ ಪಾತ್ರಕ್ಕೆ ಉದ್ದೇಶಪೂರ್ವಕವಾಗಿ ನಿರ್ಬಂಧ ಹೇರುತ್ತಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.
ಕೆಲ ಕಾರ್ಯಾಚರಣೆಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾವ ಕುರಿತು ಸಂಸ್ಥೆಯ ನೌಕರರ ಸಂಘಟನೆಗಳು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಕಟವಾದ ವರದಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಉದ್ದೇಶಿತ ಖಾಸಗೀಕರಣ ಕುರಿತು ಇಸ್ರೊ ನೌಕರರೇ ಧ್ವನಿ ಎತ್ತಿರುವುದು ಶ್ಲಾಘನೀಯ' ಎಂದೂ ಅವರು ಹೇಳಿದ್ದಾರೆ.
'ಹಲವು ದಶಕಗಳ ಪರಿಶ್ರಮದ ಫಲವಾಗಿ ಇಸ್ರೊ ತನ್ನ ಸಾಮರ್ಥ್ಯ ವೃದ್ಧಿಸಿಕೊಂಡಿದೆ. ಕೆಲ ಖಾಸಗಿ ಕಂಪನಿಗಳ ಬದ್ಧತೆ ಬಗ್ಗೆ ಸಂದೇಹ ಇದ್ದು, ಅಂತಹ ಕಂಪನಿಗಳಿಗೆ ಇಸ್ರೊ ತನ್ನ ಕೆಲ ವಿಭಾಗಗಳನ್ನು ವರ್ಗಾಯಿಸುವ ವಿಚಾರ ಆತಂಕಕಾರಿ' ಎಂದಿದ್ದಾರೆ.

