ನವದೆಹಲಿ: ಯುವಜನರು ಸಂಗೀತ ಕಛೇರಿಯಂತಹ ವಾತಾವರಣದಲ್ಲಿ ಒಟ್ಟುಗೂಡಿ ಹಿಂದೂ ಭಕ್ತಿಗೀತೆಗಳನ್ನು ಹಾಡುವ, ಅದರ ಲಯಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುವ ಮತ್ತು ನರ್ತಿಸುವ ಆಧುನಿಕ ಟ್ರೆಂಡ್ ಆದ 'ಭಜನಾ ಕ್ಲಬ್ಬಿಂಗ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಸೆ.25) ಭಾಗವಹಿಸಿದ್ದಾರೆ.
ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯ ಎದುರಿನ ಉದ್ಯಾನವನದಲ್ಲಿ, ದೀನ್‌ದಯಾಳ್ ಉಪಾಧ್ಯಾಯ ಅವರ 110ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ಅವರು ಶ್ರೀರಾಮನಿಗೆ ಸಮರ್ಪಿತವಾದ ಭಜನೆಗೆ ಚಪ್ಪಾಳೆ ತಟ್ಟುತ್ತಾ, ತಂಬೂರಿಯನ್ನು ನುಡಿಸುತ್ತಿರುವುದು ಕಂಡುಬಂದಿದೆ.
ಸಭಿಕರು ಮತ್ತು ಗಾಯಕರಲ್ಲಿ ಹೆಚ್ಚಿನವರು 'ಜೆನ್ ಝಿ' ತಲೆಮಾರಿನವರಾಗಿದ್ದು, ಆಧುನಿಕ ಹಾಗೂ ಎಲೆಕ್ಟ್ರಾನಿಕ್ ಲಯಗಳಿಗೆ ಸಂಯೋಜಿಸಲಾದ ಸಾಂಪ್ರದಾಯಿಕ ಆಧ್ಯಾತ್ಮಿಕ ಹಾಡುಗಳ ಲಯಕ್ಕೆ ತಕ್ಕಂತೆ ಜಪಿಸುತ್ತಾ, ಜೊತೆಯಲ್ಲಿ ಹಾಡುತ್ತಾ, ಚಪ್ಪಾಳೆ ತಟ್ಟುತ್ತಾ ಮತ್ತು ನರ್ತಿಸುತ್ತಾ ಸಂಭ್ರಮಿಸಿದ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.
ಯುವಜನರಲ್ಲಿ 'ಭಜನಾ ಕ್ಲಬ್ಬಿಂಗ್' ಟ್ರೆಂಡ್ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಭಾರತದ ಅನೇಕ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ.

