ನವದೆಹಲಿ: ಬಿಹಾರದಲ್ಲಿ ಮೊದಲ ಹಂತ, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತ ಹಾಗೂ 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮೂರನೇ ಹಂತದ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಆದೇಶಗಳಿಗೆ ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇಬ್ಬರು ಚುನಾವಣಾ ಆಯುಕ್ತರು ಸರ್ವಾನುಮತದಿಂದ ಅನುಮೋದನೆ ನೀಡಿದ್ದರು ಎಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಉಲ್ಲೇಖಿಸಿ Times of India ವರದಿ ಮಾಡಿದೆ.
ಆದರೆ ಸ್ಪಷ್ಟೀಕರಣ ನೀಡಿರುವ ಆಯೋಗದ ಅಧಿಕಾರಿ ಯಾರು ಎಂದು ವರದಿ ತಿಳಿಸಿಲ್ಲ.
ಈ ಆದೇಶಗಳಲ್ಲಿ ಮತದಾರ ಅಥವಾ ಅವರ ಪೋಷಕರ ಪೌರತ್ವದ ವಿವರಗಳನ್ನು ಕಡ್ಡಾಯವಾಗಿ ಘೋಷಿಸುವ ನಮೂನೆಯೊಂದಿಗೆ ಫಾರ್ಮ್ 6 ಮತ್ತು ಫಾರ್ಮ್ 8 ಅನ್ನು ಸೇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಮತದಾರರಾಗಿ ನೋಂದಣಿಯಾಗಲು ಫಾರ್ಮ್ 6 ಅರ್ಜಿ ಸಲ್ಲಿಸಲಾಗುತ್ತದೆ. ಮತದಾರರು ತಾವು ನೋಂದಣಿಯಾಗಲು ಬಯಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಹೊರಗಿನ ಸ್ಥಳದಿಂದ ತಮ್ಮ ಹೆಸರನ್ನು ಅಲ್ಲಿಗೆ ವರ್ಗಾಯಿಸಿಕೊಳ್ಳಲು ಫಾರ್ಮ್ 8 ಬಳಸಲಾಗುತ್ತದೆ.
ECINET ಪ್ರವೇಶ ನಿರ್ಬಂಧದ ಆರೋಪ ತಳ್ಳಿಹಾಕಿದ ಆಯೋಗ
'ECINET' ವ್ಯವಸ್ಥೆಯಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು (EROs), ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (AEROs), ಬೂತ್ ಮಟ್ಟದ ಅಧಿಕಾರಿಗಳು (BLOs), ಜಿಲ್ಲಾ ಚುನಾವಣಾ ಅಧಿಕಾರಿಗಳು (DEOs) ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳು (CEOs) ತಮ್ಮ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವನ್ನು ಚುನಾವಣಾ ಆಯೋಗದ ಮೂಲಗಳು ತಳ್ಳಿಹಾಕಿವೆ. ಆದರೆ ಈ ಮೂಲ ಯಾವುದು ಎಂಬುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿಲ್ಲ.
ಈ ಅಧಿಕಾರಿಗಳಿಗೆ ECINET ಪ್ರವೇಶವಿದೆ. ತಮ್ಮ ಕರ್ತವ್ಯ ನಿರ್ವಹಿಸಲು ಅವರು ವೈಯಕ್ತಿಕ ID ಮತ್ತು ಪಾಸ್‌ವರ್ಡ್ ಬಳಸಿ ವ್ಯವಸ್ಥೆಯನ್ನು ಪ್ರವೇಶಿಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.
SIR ಆದೇಶಗಳ ಪುಟಗಳ ವಿವರ ಮತ್ತು ಪ್ಯಾರಾಗಳನ್ನು ಉಲ್ಲೇಖಿಸಿ ಚುನಾವಣಾ ಆಯೋಗ ಈ ಸ್ಪಷ್ಟನೆ ನೀಡಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಮತ ಕಳ್ಳತನ' ಮತ್ತು SIR ಪ್ರಕ್ರಿಯೆಯಲ್ಲಿನ ಲೋಪದೋಷಗಳ ಆರೋಪ ಮಾಡುತ್ತಿರುವ ಸಂದರ್ಭದಲ್ಲೇ ಚುನಾವಣಾ ಆಯೋಗದ ಈ ಸ್ಪಷ್ಟನೆ ಹೊರಬಿದ್ದಿದೆ.
ಮತದಾರರ ಪಟ್ಟಿಯ SIR ಪ್ರಕ್ರಿಯೆಯಲ್ಲಿ ಆಯೋಗ ಅನುಸರಿಸಿದ ಕಾರ್ಯವಿಧಾನದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ ಎಂದು ಹೇಳಲಾದ ಚುನಾವಣಾ ಆಯುಕ್ತರಾದ ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ ಅವರನ್ನು ರಾಹುಲ್ ಗಾಂಧಿ ಗುರುವಾರ ಶ್ಲಾಘಿಸಿದ್ದರು.
ಬಿಹಾರದ ಮೊದಲ ಹಂತಕ್ಕಾಗಿ ಜೂನ್ 24, 2025ರಂದು, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎರಡನೇ ಹಂತಕ್ಕಾಗಿ ಅಕ್ಟೋಬರ್ 27, 2025ರಂದು ಮತ್ತು 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮೂರನೇ ಹಂತಕ್ಕಾಗಿ ಮೇ 14, 2026ರಂದು ಹೊರಡಿಸಲಾದ SIR ಆದೇಶಗಳಿಗೆ ಮೂವರು ಆಯುಕ್ತರು ಸರ್ವಾನುಮತದಿಂದ ಅನುಮೋದನೆ ನೀಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಹೀಗಾಗಿ, ಫಾರ್ಮ್ 6 ಮತ್ತು ಪೌರತ್ವ ಘೋಷಣಾ ನಮೂನೆ ಸೇರಿಸಿರುವುದು ಕಾನೂನುಬಾಹಿರ ಹಾಗೂ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮ ಎಂಬ ಆಕ್ಷೇಪಣೆಗಳು ನಂತರದ ಹಂತದಲ್ಲಿ ಹುಟ್ಟಿಕೊಂಡಿದ್ದವು ಎನ್ನಲಾಗಿದೆ.
ಮೂರನೇ SIR ಆದೇಶಕ್ಕೆ ಸಹಿ ಹಾಕಿದ ಎರಡು ದಿನಗಳ ಬಳಿಕ, ಮೇ 16ರಂದು ಜೋಶಿ ಫಾರ್ಮ್ 6 ಅನ್ನು ವಿರೋಧಿಸಿದ್ದರು. ಸಂಧು ಅವರು ಆಗಸ್ಟ್ 13ರಂದು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ ಮೇ 27, 2026ರಂದು SIR ಕುರಿತು ನೀಡಿದ ತೀರ್ಪಿನಲ್ಲಿ ಘೋಷಣಾ ನಮೂನೆಯನ್ನು ಸೇರಿಸುವ ಚುನಾವಣಾ ಆಯೋಗದ ಅಧಿಕಾರವನ್ನು ಎತ್ತಿಹಿಡಿದ ಕೆಲ ತಿಂಗಳುಗಳ ಬಳಿಕ ಈ ಆಕ್ಷೇಪಣೆಗಳು ವ್ಯಕ್ತವಾಗಿದ್ದವು.
ಮತದಾರರ ಅನುಕೂಲಕ್ಕಾಗಿ ಪೌರತ್ವ ಘೋಷಣಾ ನಮೂನೆಯನ್ನು ಪರಿಚಯಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಘೋಷಣಾ ನಮೂನೆಯನ್ನು ಸಲ್ಲಿಸುವವರು ಬೇರೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂಬುದು ಇದರ ಉದ್ದೇಶ ಎಂದು ಅವರು ಹೇಳಿದ್ದಾರೆ.
"ಇದನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ SIR ಪ್ರಕ್ರಿಯೆಯಲ್ಲಿ ಏಕರೂಪವಾಗಿ ಅನ್ವಯಿಸಲಾಗಿದೆ" ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.

