ಅಹಮದಾಬಾದ್: ಕೇಂದ್ರ ಸರ್ಕಾರದ ಪ್ರಸ್ತಾವಿತ ಜಾತಿ ಗಣತಿಯ ಪ್ರಶ್ನಾವಳಿಯಲ್ಲಿರುವ ಲೋಪಗಳು ಇತರೆ ಹಿಂದುಳಿದ ವರ್ಗಗಳು (OBC), ಆರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಇತರ ಅನನುಕೂಲಕ್ಕೀಡಾದ ಸಮುದಾಯಗಳ ಜನಸಂಖ್ಯಾ ದತ್ತಾಂಶವನ್ನು ವಿರೂಪಗೊಳಿಸುವ ಸಾಧ್ಯತೆಯಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಶನಿವಾರ ಹೇಳಿದರು.
ಸಮರ್ಪಕ ಜಾತಿ ಸಮೀಕ್ಷೆ ನಡೆಸುವ ವಿಚಾರದಲ್ಲಿ ಬಿಜೆಪಿ ಸರ್ಕಾರದ ಬದ್ಧತೆ ಅಸ್ಪಷ್ಟ ಹಾಗೂ ಅಪ್ರಾಮಾಣಿಕವಾಗಿದೆ ಎಂದು ಅವರು ಆರೋಪಿಸಿದರು.
ಅಹಮದಾಬಾದ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೆಹ್ಲೋಟ್, '2021ರಿಂದಲೂ ಕಾಂಗ್ರೆಸ್ ಸಮಗ್ರ ಜಾತಿ ಗಣತಿಗೆ ಆಗ್ರಹಿಸುತ್ತಿದೆ. ಆದರೆ, ಪ್ರಸ್ತಾವಿತ ಜಾತಿ ಗಣತಿಯ ಪ್ರಶ್ನಾವಳಿಯಲ್ಲಿರುವ ಲೋಪಗಳು OBC, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಇತರ ಅನನುಕೂಲಕ್ಕೀಡಾದ ಸಮುದಾಯಗಳ ಜನಸಂಖ್ಯಾ ದತ್ತಾಂಶವನ್ನು ವಿರೂಪಗೊಳಿಸುವ ಸಾಧ್ಯತೆಯಿದೆ' ಎಂದು ಎಚ್ಚರಿಸಿದರು.
ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪದೇ ಪದೇ ಪತ್ರ ಬರೆದಿದ್ದಾರೆ. ಆದರೆ, ಪ್ರಧಾನಿ ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಅಥವಾ ಸಂವಹನ ಬಂದಿಲ್ಲ ಎಂದು ಅವರು ಆರೋಪಿಸಿದರು.
ಶಿಕ್ಷಣ, ವಿದ್ಯಾರ್ಥಿವೇತನ, ಕೌಶಲಾಭಿವೃದ್ಧಿ, ಸರ್ಕಾರಿ ಉದ್ಯೋಗಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ವಿಶ್ವಾಸಾರ್ಹ ಜಾತಿವಾರು ದತ್ತಾಂಶ ಅತ್ಯಗತ್ಯ. ಶಾಸನಸಭೆಗಳು, ಅಧಿಕಾರಶಾಹಿ, ನ್ಯಾಯಾಂಗ ಹಾಗೂ ಇತರ ವಲಯಗಳಲ್ಲಿ OBC ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಾತಿನಿಧ್ಯವನ್ನು ಮೌಲ್ಯಮಾಪನ ಮಾಡಲು ಕೂಡ ನಿಖರ ದತ್ತಾಂಶದ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರಸ್ತಾವಿತ ಜಾತಿ ಗಣತಿಯ ನಮೂನೆಯನ್ನು ಪ್ರಶ್ನಿಸಿದ ಗೆಹ್ಲೋಟ್, 40 ಪ್ರಶ್ನೆಗಳನ್ನು ಒಳಗೊಂಡಿರುವ ಈ ನಮೂನೆಯಲ್ಲಿ ಜಾತಿ ಮಾಹಿತಿಯನ್ನು ಸಂಗ್ರಹಿಸುವ ರೀತಿಯೇ ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದರು. ಹಾಲಿ ನಮೂನೆಯು OBCಗಳ ಜನಸಂಖ್ಯೆಯನ್ನು ಸಮರ್ಪಕವಾಗಿ ದಾಖಲಿಸುವುದಿಲ್ಲ ಎಂದು ದೂರಿದರು.
'ತಪ್ಪಾದ ಅಂಕಿ-ಅಂಶಗಳು ಕೇವಲ ಸಾಂಖ್ಯಿಕ ಲೋಪವಲ್ಲ; ಅವು ಭವಿಷ್ಯದ ತಲೆಮಾರಿನ ಹಕ್ಕುಗಳ ಮೇಲೂ ಪರಿಣಾಮ ಬೀರಬಲ್ಲವು' ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಈಗಾಗಲೇ ಇರುವ ಪೂರ್ವಪ್ರಮಾಣೀಕೃತ ಜಾತಿ ಪಟ್ಟಿಯನ್ನು ಬಳಸುವ ಬದಲು, ಮುಕ್ತ ಜಾತಿ ಪ್ರತಿಕ್ರಿಯೆ ಮಾದರಿಯನ್ನು ಅನುಸರಿಸಲು ಮುಂದಾಗಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ಈಗಾಗಲೇ ಮಾನ್ಯತೆ ಪಡೆದ ಜಾತಿ ಪಟ್ಟಿಗಳಿವೆ. ಹಾಗಿದ್ದರೂ ಈ ಪ್ರಮಾಣೀಕೃತ ಪಟ್ಟಿಯನ್ನು ಗಣತಿದಾರರಿಗೆ ಏಕೆ ಒದಗಿಸುತ್ತಿಲ್ಲ ಎಂದು ಪ್ರಶ್ನಿಸಿದರು.
'ವಿವಿಧ ಹೆಸರುಗಳಲ್ಲಿ ಕರೆಯಲಾಗುವ ಜಾತಿಗಳು, ಉಪಜಾತಿಗಳು ಹಾಗೂ ಪ್ರಾದೇಶಿಕ ಹೆಸರುಗಳಿರುವ ದೇಶದಲ್ಲಿ ಮುಕ್ತ ವ್ಯವಸ್ಥೆಯ ಮೂಲಕ ಜಾತಿ ಗಣತಿ ನಡೆಸುವುದರಿಂದ ದತ್ತಾಂಶ ಛಿದ್ರಗೊಳ್ಳುವ ಸಾಧ್ಯತೆಯಿದೆ' ಎಂದು ಅವರು ಹೇಳಿದರು.
ಕಾಗುಣಿತ, ಉಪನಾಮಗಳು ಹಾಗೂ ಪ್ರಾದೇಶಿಕ ಹೆಸರುಗಳಲ್ಲಿನ ವ್ಯತ್ಯಾಸದಿಂದಾಗಿ ಒಂದೇ ಜಾತಿಯನ್ನು ವಿವಿಧ ಹೆಸರುಗಳಲ್ಲಿ ದಾಖಲಿಸುವ ಸಾಧ್ಯತೆಯಿದೆ. ಇದರಿಂದ ಆಯಾ ಜಾತಿಯ ಜನಸಂಖ್ಯೆಯ ಎಣಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಅವರು ಪ್ರತಿಪಾದಿಸಿದರು.
'ಅಧಿಕೃತ ಜಾತಿ ಪಟ್ಟಿಗಳು ಲಭ್ಯವಿರುವಾಗ ಅವುಗಳನ್ನೇ ಏಕೆ ಬಳಸಿಕೊಳ್ಳುತ್ತಿಲ್ಲ ಎಂಬುದು ನನ್ನ ನೇರ ಪ್ರಶ್ನೆಯಾಗಿದೆ' ಎಂದು ಗೆಹ್ಲೋಟ್ ಹೇಳಿದರು.
ಜಾತಿ ಗಣತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿದ ಅವರು, ಸಾಮಾಜಿಕ ನ್ಯಾಯ ಹಾಗೂ ಕಲ್ಯಾಣ ಯೋಜನೆಗಳಿಗಾಗಿ ನಿಖರ ಜಾತಿವಾರು ದತ್ತಾಂಶವನ್ನು ಖಾತರಿಪಡಿಸಲು ರಾಜಕೀಯ ಪಕ್ಷಗಳು, ತಜ್ಞರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.
ಈ ಸಮಾಲೋಚನೆ ಬಳಿಕವಷ್ಟೇ ಹೊಸ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

