HEALTH TIPS

ಮಿಲಿಟರಿ ಸೇವೆ: ಇಸ್ರೇಲ್ ಸರ್ಕಾರದ ನಿಯಮಕ್ಕೆ ಲಿಂಗತ್ವ ಅಲ್ಪಸಂಖ್ಯಾತ ಯುವತಿ ವಿರೋಧ

ಜೇರುಸೆಲಂ: ಸಂಘರ್ಷಗಳು ನಿರಂತರವಾಗಿ ನಡೆಯುವಾಗ ಮಾನವೀಯ ದುರಂತಗಳು ಕೇವಲ ಅಂಕಿ-ಅಂಶಗಳಾಗಿ ಉಳಿಯುತ್ತವೆ. ಇಂತಹ ಕಾಲಘಟ್ಟದಲ್ಲಿ, ಕೆಲವರ ದಿಟ್ಟ ನಿರ್ಧಾರಗಳು ಕತ್ತಲಿನಲ್ಲಿರುವ ಸಮಾಜಕ್ಕೆ ಭರವಸೆಯ ಬೆಳಕಾಗಿ ಮೂಡುತ್ತವೆ.


ಇದಕ್ಕೆ ತಾಜಾ ಉದಾಹರಣೆ, ಇಸ್ರೇಲ್ ಸರ್ಕಾರದ ಕಡ್ಡಾಯ ಮಿಲಿಟರಿ ಸೇವೆಯನ್ನು ಬಹಿರಂಗವಾಗಿ ಧಿಕ್ಕರಿಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು. 

ಕಳೆದ ವರ್ಷ 18ರ ಹರೆಯದ ಎಲ್ಡಾ ಕೀಡರ್ ಗ್ರೀನ್‌ಬರ್ಗ್ ಎಂಬ ಲಿಂಗತ್ವ ಅಲ್ಪಸಂಖ್ಯಾತ ಯುವತಿ ಇಸ್ರೇಲ್ ರಕ್ಷಣಾ ಪಡೆಯಲ್ಲಿ (ಐಡಿಎಫ್) ಸೇವೆ ಸಲ್ಲಿಸಲು ನಿರಾಕರಿಸಿದರು. 2023ರ ಹಮಾಸ್ ದಾಳಿಯ ನಂತರ ಮಿಲಿಟರಿ ಸೇವೆಯನ್ನು ಬಹಿರಂಗವಾಗಿ ಧಿಕ್ಕರಿಸಿದ ಮೊದಲಿಗರು ಇವರಾಗಿದ್ದಾರೆ. ಮಿಲಿಟರಿಯಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಕ್ಕೆ ಸರ್ಕಾರ ಇವರನ್ನು ಸೆರೆಮನೆಗೆ ತಳ್ಳಿದೆ.

ಪ್ರತಿಯೊಬ್ಬರು ಮಿಲಿಟರಿ ಸೇರುವುದು ಕಡ್ಡಾಯ...

ಇಸ್ರೇಲ್‌ನಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಯಹೂದಿ ಪ್ರಜೆಗೂ ಮಿಲಿಟರಿ ಸೇವೆ ಕಡ್ಡಾಯ. ಧಾರ್ಮಿಕ ಅಥವಾ ವೈದ್ಯಕೀಯ ಕಾರಣ ಹೊರತುಪಡಿಸಿ ಇದರಿಂದ ವಿನಾಯಿತಿ ಸಿಗುವುದು ತೀರಾ ವಿರಳ. ಸೈನ್ಯ ಸೇರಲು ನಿರಾಕರಿಸುವವರು ಅತ್ಯಂತ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜೈಲು ಶಿಕ್ಷೆ, ಸಾಮಾಜಿಕ ಬಹಿಷ್ಕಾರ, ಸ್ನೇಹಿತರು, ಬಂಧುಗಳು ಹಾಗೂ ಕುಟುಂಬದವರಿಂದಲೇ ವಿರೋಧ ವ್ಯಕ್ತವಾಗುತ್ತದೆ. ಇವೆಲ್ಲವನ್ನು ಬದಿಗೊತ್ತಿ ಎಲ್ಡಾ ಕೀಡರ್ ಗ್ರೀನ್‌ಬರ್ಗ್ ತಮ್ಮ ವಿವೇಕದ ದನಿಗೆ ಓಗೊಟ್ಟಿದ್ದಾರೆ.

ಇದಕ್ಕೂ ಮುನ್ನ 2016ರಲ್ಲಿ ಏಡೆನ್ ಕಾಟ್ರಿ ಎಂಬ ಮತ್ತೊರ್ವ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಸೈನ್ಯ ಸೇರಲು ನಿರಾಕರಿಸಿದ್ದರು. 'ಅರಬ್ಬರು ಮತ್ತು ಯಹೂದಿಗಳು ಈ ದೇಶದಲ್ಲಿ ಎರಡು ಬೇರೆ ಬೇರೆ ವರ್ಗಗಳಾಗಿ ಬದುಕುತ್ತಿದ್ದಾರೆ. ನಾನು ಮಿಲಿಟರಿ ಸೇರಿದರೆ ಇನ್ನೊಂದು ಸಮುದಾಯದ ಮೇಲಿನ ದೌರ್ಜನ್ಯಕ್ಕೆ ನೇರವಾಗಿ ಕಾರಣಳಾಗುತ್ತೇನೆ. ಅಷ್ಟು ಮಾತ್ರವಲ್ಲದೆ ಆ ಸಮುದಾಯಕ್ಕೆ ವಂಚನೆ ಮಾಡಿದಂತಾಗುತ್ತದೆ ಎಂದು ಏಡೆನ್ ಕಾಟ್ರಿ ಹೇಳಿದ್ದರು. ಸೇನೆ ಸೇರಲು ನಿರಾಕರಿಸಿದ್ದಕ್ಕೆ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.

ಇಸ್ರೇಲ್‌ನಲ್ಲಿ ಸೈನ್ಯ ಸೇರಲು ನಿರಾಕರಿಸುವವರನ್ನು 'ರೆಫ್ಯೂಸೆನಿಕ್' ಎಂದು ಕರೆಯುತ್ತಾರೆ. ಇವರು ಇಸ್ರೇಲ್‌ನ ಕಡ್ಡಾಯ ಮಿಲಿಟರಿ ಸೇವೆಯನ್ನಷ್ಟೇ ಅಲ್ಲದೆ, ಅನ್ಯ ದೇಶಗಳ ಮೇಲಿನ ಆಕ್ರಮಣಕಾರಿ ಧೋರಣೆಯನ್ನೂ ವಿರೋಧಿಸುತ್ತಿದ್ದಾರೆ. ಲಿಂಗತ್ವದ ಶೋಷಣೆ ಮತ್ತು ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯಗಳು ಅಧಿಕಾರಶಾಹಿ ಮನಸ್ಥಿತಿಯಿಂದ ಬರುತ್ತವೆ ಎಂಬುದು ಇವರ ಪ್ರತಿಪಾದನೆ.

'ಪಿಂಕ್‌ವಾಷಿಂಗ್'ಗೆ ಸವಾಲು...

ಲೆಸ್ಬಿಯನ್‌, ಗೇ, ಬೈಸೆಕ್ಸುಯಲ್‌, ಟ್ರಾನ್ಸ್‌ಜೆಂಡರ್‌, ಮತ್ತು ಕ್ವಿಯರ್‌ (ಎಲ್‌ಜಿಬಿಟಿಕ್ಯು) ಸಮುದಾಯಗಳ ಸುರಕ್ಷಿತ ತಾಣ ಎಂದು ಬಿಂಬಿಸಿಕೊಳ್ಳುವ ಇಸ್ರೇಲ್‌ಗೆ ಲಿಂಗತ್ವ ಅಲ್ಪಸಂಖ್ಯಾತರು ಸೇನೆ ಸೇರುವ ವಿರೋಧಿ ನಿಲುವು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇಸ್ರೇಲ್ ಸರ್ಕಾರ ತನ್ನ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳಿಂದ ಮುಕ್ತವಾಗಲು 'ಪಿಂಕ್‌ವಾಷಿಂಗ್' (ಗಂಭೀರ ಸಮಸ್ಯೆಗಳನ್ನು ಮರೆಮಾಚುವುದು) ತಂತ್ರಕ್ಕೆ ಮೊರೆ ಹೋಗುತ್ತಿದೆ ಎಂದು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರರು ಆರೋಪಿಸುತ್ತಾರೆ

ಯಹೂದಿ ತತ್ವಶಾಸ್ತ್ರದಲ್ಲಿ 'ತಿಕ್ಕುನ್ ಓಲಾಂ' (ವಿಶ್ವವನ್ನು ಸರಿಪಡಿಸುವ ಅಥವಾ ಮರುನಿರ್ಮಿಸುವ ಜವಾಬ್ದಾರಿ) ಎಂಬ ಮಾನವೀಯ ಪರಿಕಲ್ಪನೆಯಿದೆ. ಇದಕ್ಕೆ ಎಲ್ಡಾ ಮತ್ತು ಏಡೆನ್ ಅವರು ಬದ್ದರಾಗಿದ್ದಾರೆ. ಯಹೂದಿ ಧರ್ಮದ ಮೇಲಿನ ನಿಷ್ಠೆಯೆಂದರೆ ಆಕ್ರಮಣಶೀಲತೆಯನ್ನು ಬೆಂಬಲಿಸುವುದಲ್ಲ ಎಂಬುದನ್ನು ಇವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

'ಭವಿಷ್ಯದಲ್ಲಿ ನನ್ನ ಮೊಮ್ಮಕ್ಕಳು, ಅಪಾಯದ ಕಾಲದಲ್ಲಿ ನೀನು ಏನು ಮಾಡಿದೆ? ಎಂದು ಕೇಳಿದರೆ, ನಾನು ಶರಣಾಗಲಿಲ್ಲ, ಪ್ರತಿಭಟಿಸಿದೆ' ಎಂದು ಹೆಮ್ಮೆಯಿಂದ ಹೇಳುತ್ತೇನೆ' ಎಂದು ಜೈಲಿಗೆ ಹೋಗುವ ಮುನ್ನ ಎಲ್ಡಾ ಈ ಮಾತನ್ನು ಹೇಳಿದ್ದರು.

ಹಿಂಸೆಯನ್ನು ತಡೆಯಲು ಇವರಿಂದ ತಕ್ಷಣಕ್ಕೆ ಸಾಧ್ಯವಾಗದೇ ಇರಬಹುದು. ಆದರೆ ಜರ್ಮನಿಯ 'ಯಹೂದಿ ಮಾರಣಹೋಮ'ದ ದುರಂತ ಮತ್ತೆ ನಡೆಯಬಾರದು ಎಂಬುದಕ್ಕೆ ಇವರು ಪ್ರಾಮಾಣಿಕವಾಗಿ ಬದ್ಧರಾಗಿದ್ದಾರೆ. ಹಿಂಸೆಯ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವ ಪ್ರತಿಯೊಬ್ಬರಿಗೂ ಈ ಯುವತಿಯರು ಮಾದರಿಯಾಗುವ ಮೂಲಕ ಶಾಂತಿ ಸ್ಥಾಪಿಸುವ ದಾರಿಗೆ ಮೈಲುಗಲ್ಲಾಗಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries