ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿದ್ದ ಐದು ಅಂತಸ್ತಿನ 'ಹಾಸ್ಟೆಲ್ ಡೇಜ್' ಕಟ್ಟಡ ಕುಸಿತದ ನಂತರ ಅದರ ಮಾಲೀಕನನ್ನು ರಾಜಸ್ಥಾನದ ಭಿವಡಿಯಲ್ಲಿ ಸೋಮವಾರ(ಸೆ.7) ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
'ಹಾಸ್ಟೆಲ್ ಡೇಜ್' ಕಟ್ಟಡದ ಮಾಲೀಕರಾದ ಹರಿರಾಮ್ ಗುಪ್ತಾ ಅವರನ್ನು ರಾಜಸ್ಥಾನದ ಭಿವಡಿಯಲ್ಲಿ ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಹತ್ತಿರದಲ್ಲಿದ್ದ ದಶಕಕ್ಕೂ ಹಳೆಯ ಐದು ಅಂತಸ್ತಿನ ಕಟ್ಟಡದಲ್ಲಿ ಹುಡುಗರ ಪಿಜಿ ಇತ್ತು. ಸೆ.6ರಂದು ಸಂಭವಿಸಿದ ಕಟ್ಟಡ ಕುಸಿತದಿಂದ 7 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇಲ್ಲಿದ್ದ ಹೆಚ್ಚಿನ ವಿದ್ಯಾರ್ಥಿಗಳು ಕೇರಳ, ಹರಿಯಾಣ ಮತ್ತು ಉತ್ತರ ಪ್ರದೇಶದವರಾಗಿದ್ದಾರೆ. ಇವರು ಮೋತಿಲಾಲ್ ನೆಹರೂ ಕಾಲೇಜು, ಆತ್ಮಾರಾಮ್ ಸನಾತನ ಧರ್ಮ ಕಾಲೇಜು ಮತ್ತು ಶ್ರೀ ವೆಂಕಟೇಶ್ವರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಘಟನೆ ಸಂಬಂಧ ದೆಹಲಿ ಮಹಾನಗರ ಪಾಲಿಕೆಯು(ಎಂಸಿಡಿ) ದಕ್ಷಿಣ ವಲಯದ ಉಪ ಆಯುಕ್ತ ರಾಕೇಶ್ ಕುಮಾರ್ ಮತ್ತು ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ.

