ಚೆನ್ನೈ: ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ದ್ವಂದ್ವಾರ್ಥದ ಮಾತುಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಎಚ್ಚರಿಕೆ ನೀಡಿದ್ದಾರೆ.
ನಟಿ ತ್ರಿಷಾ ಕೃಷ್ಣನ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಉದಯನಿಧಿ ಸ್ಟಾಲಿನ್ ನೀಡಿದ್ದ ದ್ವಂದ್ವಾರ್ಥ ಮತ್ತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ, ವಿಜಯ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಮಹಿಳೆಯರೇ ನನ್ನ ಗೆಲುವಿನ ರೂವಾರಿಗಳು
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, ನನ್ನ ರಾಜಕೀಯ ಗೆಲುವಿನ ಹಿಂದೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮಹಿಳೆಯರ ವಿರುದ್ಧ ಬಳಸಲಾಗುವ ಯಾವುದೇ ಕೆಟ್ಟ ಭಾಷೆ ಅಥವಾ ದ್ವಂದ್ವಾರ್ಥದ ಮಾತುಗಳನ್ನು ನಾನು ಎಂದಿಗೂ ಸಹಿಸುವುದಿಲ್ಲ. ರಾಜಕೀಯದಲ್ಲಿ ಕಠಿಣ ಟೀಕೆಗಳು ಏನೇ ಇರಲಿ, ಆದರೆ ಮಹಿಳೆಯರ ತೇಜೋವಧೆ ಮಾಡುವ ಹೇಳಿಕೆಗಳಿರಬಾರದು ಎಂದು ಪ್ರತಿಪಾದಿಸಿದ್ಧಾರೆ.
ಮುಂದುವರಿದು, ಇತ್ತೀಚೆಗೆ ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ಧ ಕೆಟ್ಟ ಭಾಷೆ ಬಳಸುವುದು, ದ್ವಂದ್ವಾರ್ಥದಲ್ಲಿ ಮಾತನಾಡುವುದು ಹೆಚ್ಚಾಗುತ್ತಿದೆ. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಯಾರೇ ಆಗಲಿ ಕೀಳಾಗಿ ಮಾತನಾಡಬಾರದು. ಹಿರಿಯ ನಾಯಕಿ ಜಯಲಲಿತಾ ಅವರೂ ಇದೇ ವಿಧಾನಸಭೆಯಲ್ಲಿ ಎಷ್ಟೊಂದು ಅವಮಾನ ಎದುರಿಸಿದ್ದರು ಎಂಬುದು ನಮಗೆಲ್ಲ ತಿಳಿದಿದೆ. ಮಹಿಳೆಯರಿಗೆ ಗೌರವ ಕೊಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕು, ಇಲ್ಲದಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಏನಿದು ಪ್ರಕರಣ?
ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಂಜಾವೂರಿನಲ್ಲಿ ಆಯೋಜಿಸಿದ್ದ ರೈತರ ಪ್ರತಿಭಟನೆಯಲ್ಲಿ ಉದಯನಿಧಿ ಮಾತನಾಡಿದ್ದರು. ಈ ವೇಳೆ ತ್ರಿಷಾ ವಿರುದ್ಧ ಅವಹೇಳನಕಾರಿ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಂಜಾವೂರು ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಎಸ್.ಬೈರವಿ ಅವರು ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಉದಯನಿಧಿ ವಿರುದ್ಧ ದೂರು ನೀಡಿದ್ದರು.
'ಆ.3ರಂದು ನಡೆದ ಪ್ರತಿಭಟನೆಯಲ್ಲಿ ಉದಯನಿಧಿ ಅವರು ಭಾಷಣ ಮಾಡುತ್ತಿದ್ದಾಗ ಕೆಲವರು 'ತ್ರಿಷಾ, ತ್ರಿಷಾ' ಎಂದು ಜೋರಾಗಿ ಕೂಗಿದ್ದಾರೆ. ಅದಕ್ಕೆ ಉದಯನಿಧಿ ಅಶ್ಲೀಲ ಮತ್ತು ದ್ವಂದ್ವಾರ್ಥದ ಮಾತಿನ ಮೂಲಕ ಪ್ರತಿಕ್ರಿಯಿಸಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 4ರಂದು ತಮಿಳುನಾಡು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿದ್ದರು. ತದನಂತರ ಮದ್ರಾಸ್ ಹೈಕೋರ್ಟ್ ಆದೇಶದಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಘಟನೆಯು ತಮಿಳುನಾಡಿನಲ್ಲಿ ರಾಜಕೀಯ ವಿವಾದ ಸೃಷ್ಟಿಸಿತ್ತು.
ಮಹಿಳಾ ಆಯೋಗಕ್ಕೂ ದೂರು:
ಟಿವಿಕೆ ರಾಷ್ಟ್ರೀಯ ವಕ್ತಾರ ಪಿ.ಸೆಲ್ವಕುಮಾರ್ ಅವರು ದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಅಧಿಕೃತ ದೂರು ಸಲ್ಲಿಸಿದ್ದರು. ಉದಯನಿಧಿ ಅವರಿಂದ ವಿವರಣೆ ಕೋರಿ ನೋಟಿಸ್ ಜಾರಿಗೊಳಿಸುವಂತೆ ಹಾಗೂ ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸುವಂತೆ ಆಡಳಿತ ಪಕ್ಷವು ಆಯೋಗವನ್ನು ಕೋರಿತ್ತು.

