ನವದೆಹಲಿ: ಜಂತರ್ ಮಂತರ್ ನಲ್ಲಿ ಈ ವರ್ಷ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ತನ್ನ ಚಿತ್ರವನ್ನು ಕೃತಕ ಬುದ್ಧಿಮತ್ತೆ (AI) ಹಾಗೂ ಮುಖ ಬದಲಾಯಿಸುವ ತಂತ್ರಜ್ಞಾನ ಬಳಸಿ ತಿರುಚಿ, ತನ್ನ ಒಪ್ಪಿಗೆಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಎಂದು ಮಹಿಳೆಯೊಬ್ಬರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಆಧಾರದಲ್ಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಮಹಿಳೆ ನೀಡಿದ್ದ ದೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರನ್ನು ಆರೋಪಿಗಳೆಂದು ಹೆಸರಿಸಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ CJP ನಾಯಕರಾದ ಸೌರವ್ ದಾಸ್, ಅಭಿಜೀತ್ ದೀಪ್ಕೆ, ಅಶುತೋಷ್ ರಾಂಕಾ ಹಾಗೂ ರತ್ನ ಸಿಂಗ್ ಅವರಿಗೆ ದಿಲ್ಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಮಹಿಳೆಗೆ ಸಂಬಂಧಿಸಿದ ಎಲ್ಲ ಆಕ್ಷೇಪಾರ್ಹ ಚಿತ್ರಗಳು ಮತ್ತು ಅವುಗಳ ಲಿಂಕ್ ಗಳನ್ನು 24 ಗಂಟೆಯೊಳಗೆ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆ ಮೆಟಾಗೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಮಹಿಳೆಗೆ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಮಹಿಳೆಯ ದೂರಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರಿಗೂ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ, ಪ್ರಕರಣದ ವಸ್ತುಸ್ಥಿತಿ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಗಿರೀಶ್ ಕಠ್ಪಾಳಿಯ, "ಇದೊಂದು ಅಸಾಧಾರಣ ಸ್ಥಿತಿಯಾಗಿದ್ದು, ಇದು ಕೇವಲ ಓರ್ವ ಮಹಿಳೆಯ ವಿಚಾರವಲ್ಲ; ಬದಲಿಗೆ, ದೇಶದ ಪ್ರಧಾನಿಗೆ ಸಂಬಂಧಿಸಿದ ವಿಚಾರ. ಅವು ಸೂಕ್ಷ್ಮವಲ್ಲದಿದ್ದರೆ, ಅವು ಸೂಕ್ಷ್ಮವಾಗುವಂತೆ ನಾನು ಖಚಿತಪಡಿಸುತ್ತೇನೆ" ಎಂದು ಎಚ್ಚರಿಕೆ ನೀಡಿದರು.

