ಜೆರುಸಲೆಮ್: ಹಮಾಸ್ ಬಂಡುಕೋರ ಸಂಘಟನೆಯು ಇಸ್ರೇಲ್ ಮೇಲೆ 2023ರ ಅಕ್ಟೋಬರ್‌ನಲ್ಲಿ ದಾಳಿ ನಡೆಸಿತ್ತು. ಆದರೆ, ಅದಕ್ಕೂ ಕೆಲವು ದಿನಗಳ ಮೊದಲೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.
ಗಾಜಾದ ಹಮಾಸ್ ಸಂಘಟನೆಯ ನಾಯಕ ಯಹ್ಯಾ ಸಿನ್ವರ್ ದೊಡ್ಡ ಕಾರ್ಯಾಚರಣೆಗೆ ಯೋಜನೆ ರೂಪಿಸುತ್ತಿರುವುದಾಗಿ ಜಾಯೆದ್ ಅವರು 2023ರ ಸೆಪ್ಟೆಂಬರ್‌ನಲ್ಲೇ ಹೇಳಿದ್ದರು. ಅದಕ್ಕೆ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದ ನೆತನ್ಯಾಹು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದಿದ್ದರು ಎಂಬುದಾಗಿ ಇಸ್ರೇಲ್‌ನ 'ಹಾರೆಟ್ಜ್' ಪತ್ರಿಕೆ ಉಲ್ಲೇಖಿಸಿದೆ.
ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆಸಿದ ದಾಳಿಯಿಂದಾಗಿ ಸುಮಾರು 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. 250ಕ್ಕೂ ಹೆಚ್ಚು ಜನರನ್ನು ಒತ್ತೆಯಿರಿಸಿಕೊಳ್ಳಲಾಗಿತ್ತು. ಅದಾದ ನಂತರ ಇಸ್ರೇಲ್ ಪ್ರತಿದಾಳಿ ನಡೆಸಿತ್ತು. ಅಲ್ಲಿಂದಾಚೆಗೆ, ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಣ ಬಿಕ್ಕಟ್ಟು ಮುಂದುವರಿದಿದೆ.
ಸೋಲಿನ ಭೀತಿಯಲ್ಲಿ ನೆತನ್ಯಾಹು
ಇಸ್ರೇಲ್‌ನ ದೀರ್ಘಾವಧಿ ಪ್ರಧಾನಿ ಎನಿಸಿರುವ ನೆತನ್ಯಾಹು, ಅಕ್ಟೋಬರ್ 27ರಂದು ನಡೆಯುವ ಚುನಾವಣೆಯಲ್ಲಿ ಜಯ ಸಾಧಿಸಿ ಏಳನೇ ಬಾರಿಗೆ ಅಧಿಕಾರಕ್ಕೇರುವ ಯೋಜನೆಯಲ್ಲಿದ್ದಾರೆ. ಆದರೆ, 2023ರ ಹಮಾಸ್ ಮೇಲಿನ ದಾಳಿ, ನಂತರ ಗಾಜಾ, ಇರಾನ್ ಮತ್ತು ಲೆಬನಾನ್ ಮೇಲಿನ ಯುದ್ಧಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ ಎನ್ನಲಾಗುತ್ತಿದೆ.
ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷವನ್ನೊಳಗೊಂಡ ನ್ಯಾಷನಲಿಸ್ಟ್ ರಿಲೀಜಿಯಸ್ ಮೈತ್ರಿಕೂಟಕ್ಕೆ ಮುಂಬರುವ ಚುನಾವಣೆಯಲ್ಲಿ ಸೋಲಾಗುವ ಸಾಧ್ಯತೆ ಇದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ, ಬಲಪಂಥೀಯ ಸಂಘಟನೆಗಳು, ಪಕ್ಷಗಳನ್ನು ಒಗ್ಗೂಡಿಸಲು ನೆತನ್ಯಾಹು ಪ್ರಯತ್ನಿಸುತ್ತಿದ್ದಾರೆ.

