ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಅಕ್ಟೋಬರ್ 10ರಂದು ನಡೆಯಲಿರುವ ಪ್ರತಿಭಟನೆಗೆ ಮುನ್ನ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೈಗೊಂಡಿರುವ ನಿರ್ಬಂಧಗಳು ನ್ಯಾಯಾಂಗದ ಗಮನ ಸೆಳೆದಿವೆ. ದಿಲ್ಲಿಗೆ ಆಗಮಿಸುವ ರೈಲುಗಳ ಸಂಚಾರ ರದ್ದು, ಮೆಟ್ರೊ ನಿಲ್ದಾಣಗಳ ಮುಚ್ಚುವಿಕೆ ಮತ್ತು ಇಂಟರ್ನೆಟ್ ಸೇವೆ ಸ್ಥಗಿತದ ಕ್ರಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಸೇರಿದಂತೆ ಹಲವು ವಕೀಲರು ಶುಕ್ರವಾರವೇ ಅರ್ಜಿಯ ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮುಂದೆ ಮನವಿ ಮಾಡಿದರು.
'ನನ್ನ ದೇಶಕ್ಕೆ ಏನಾಗುತ್ತಿದೆ?' ಎಂದು ಸಿಬಲ್ ಆತಂಕ ವ್ಯಕ್ತಪಡಿಸಿದರು. ದಿಲ್ಲಿ ಮತ್ತು ನಿಝಾಮುದ್ದೀನ್ ಗೆ ಆಗಮಿಸುವ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಹೋಟೆಲ್‌ಗಳು ಅತಿಥಿಗಳನ್ನು ಸ್ವೀಕರಿಸದಂತೆ ಸೂಚನೆ ನೀಡಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಈ ವಿಷಯವಾಗಿ ದಿಲ್ಲಿ ಹೈಕೋರ್ಟ್‌ಗೆ ಏಕೆ ಅರ್ಜಿ ಸಲ್ಲಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಬಲ್, ಇಂಡಿಯನ್ ಯೂತ್ ಕಾಂಗ್ರೆಸ್ ಇದೇ ವಿಷಯವಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ ಎಂದರು.
ಪ್ರತಿಭಟನೆಯ ಆಯೋಜಕರನ್ನು ಪ್ರತಿನಿಧಿಸುತ್ತಿದ್ದೀರಾ ಎಂದು ನ್ಯಾಯಪೀಠ ಸಿಬಲ್ ಅವರನ್ನು ಪ್ರಶ್ನಿಸಿತು. ತಾವು CPI(M) ಕಾರ್ಯದರ್ಶಿ ಎಂ.ಎ. ಬೇಬಿ ಅವರನ್ನು ಪ್ರತಿನಿಧಿಸುತ್ತಿರುವುದಾಗಿ ಅವರು ತಿಳಿಸಿದರು. ಆದರೆ, ಬೇಬಿ ಪ್ರತಿಭಟನೆಯ ಆಯೋಜಕರಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯ ಆಯೋಜಕರು ನ್ಯಾಯಾಲಯದ ಮುಂದೆ ಹಾಜರಾಗಿಲ್ಲ ಮತ್ತು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿಯನ್ನೂ ಸಲ್ಲಿಸಿಲ್ಲ ಎಂದು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಹೇಳಿದರು. ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದರೆ ಅದು ಕಾನೂನುಬಾಹಿರವಾಗಲಿದ್ದು, ಭಾಗವಹಿಸುವವರು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ದಿಲ್ಲಿ ಪೊಲೀಸರು ಕಾಕ್ರೋಚ್ ಜನತಾ ಪಾರ್ಟಿ (CJP)ಗೆ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಆದರೆ, ಪಕ್ಷವು ಈ ಆದೇಶವನ್ನು ಪ್ರಶ್ನಿಸುತ್ತಿಲ್ಲ ಎಂದು ವಕೀಲೆ ವೃಂದಾ ಗ್ರೋವರ್ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರತಿಭಟನೆಗೆ ಅನುಮತಿ ಕೋರಿ ಇಂಡಿಯನ್ ಯೂತ್ ಕಾಂಗ್ರೆಸ್ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಪ್ರತಿಭಟನೆಗೆ ನಿಗದಿಪಡಿಸಿದ್ದ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದರಿಂದ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಗ್ರೋವರ್ ಹೇಳಿದರು.
ಸೋಮವಾರದ ವೇಳೆಗೆ ಈ ವಿಷಯ ಭಾಗಶಃ ಅಪ್ರಸ್ತುತವಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.
221 CAPF ಕಂಪೆನಿಗಳ ನಿಯೋಜನೆ
ದಿಲ್ಲಿಯಲ್ಲಿ ಅಭೂತಪೂರ್ವ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದರು.
'221 CAPF ಕಂಪನಿಗಳ ನಿಯೋಜನೆ, 10 ಬಂಧನ ಕೇಂದ್ರಗಳ ಸಿದ್ಧತೆ, ರೈಲು ಸಂಚಾರದ ಮೇಲೆ ನಿಯಂತ್ರಣ, ಹೊಸ ಬುಕಿಂಗ್ ಸ್ವೀಕರಿಸದಂತೆ OYO ಹೋಟೆಲ್‌ಗಳಿಗೆ ಸೂಚನೆ, ಯೂಟ್ಯೂಬರ್‌ಗಳ ವಿರುದ್ಧ ಕ್ರಮ, ಮಾಧ್ಯಮ ಪ್ರತಿನಿಧಿಗಳಿಗೆ ಗುರುತಿನ ಚೀಟಿ ಕಡ್ಡಾಯ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ದಿಲ್ಲಿ ಪೊಲೀಸರಿಂದ ಸಲಹೆ' ನೀಡಿರುವುದಾಗಿ ಅವರು ವಿವರಿಸಿದರು.
ನಿರ್ಬಂಧಗಳಿಂದ ಬಾಧಿತರಾಗುವ ನಿವಾಸಿಗಳನ್ನು ಪ್ರತಿನಿಧಿಸುತ್ತಿರುವುದಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ತಿಳಿಸಿದರು. ಸರಕಾರದ ಕ್ರಮಗಳು ಅಗತ್ಯಕ್ಕೆ ಅನುಗುಣವಾಗಿವೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
'ನಿರ್ಬಂಧಗಳಿಗೆ ತಡೆ ನೀಡಿದರೂ ಜನರು ಗುಂಪುಗೂಡುವುದಕ್ಕೂ ತಡೆ ನೀಡುತ್ತೇವೆ' ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಂಕರನಾರಾಯಣನ್, ಈ ವಿಷಯದಲ್ಲಿ ನ್ಯಾಯಾಲಯ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.
ಹೆಚ್ಚಿನ ವಿವರಗಳೊಂದಿಗೆ ಮಧ್ಯಾಹ್ನ 2 ಗಂಟೆಗೆ ಮತ್ತೆ ಅರ್ಜಿ ಪ್ರಸ್ತಾಪಿಸುವುದಾಗಿ ಸಿಬಲ್ ಮತ್ತು ಇತರ ವಕೀಲರು ತಿಳಿಸಿದರು. ಈ ವಿಷಯವನ್ನು ಅದೇ ದಿನ ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಬಹುದು ಎಂದೂ ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದರು.



