ಜೆರುಸಲೇಂ: ಇಸ್ರೇಲ್ ಕಡೆಗೆ ಹೊರಟಿದ್ದ ವಿಮಾನವನ್ನು ಪತನಗೊಳಿಸುವ ಪ್ರಯತ್ನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ದಾಳಿ ನಡೆಸಿದ್ದ 'ಫ್ಲೈದುಬೈ' ಸಂಸ್ಥೆಯ ಸಹ ಪೈಲಟ್, ಈ ಸಂಸ್ಥೆಗೆ ಸೇರುವ ಮುನ್ನಡೆ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಅಂಶ ತನಿಖೆಯಿಂದ ಬಯಲಾಗಿದೆ ಎಂದು ತನಿಖೆಯ ವಿವರ ತಿಳಿದಿರುವ ಇಬ್ಬರು ಇಸ್ರೇಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು 'ರಾಯಿಟರ್ಸ್' ವರದಿ ಮಾಡಿದೆ. ತನಿಖಾ ವಿವರಗಳನ್ನು ಹಂಚಿಕೊಂಡ ಮೂಲಗಳು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ.
ಈತ ವರ್ಷದ ಆರಂಭದಲ್ಲೂ ಟೆಲ್ ಅವೀವ್‌ಗೆ ತೆರಳುವ ವಿಮಾನವನ್ನು ಚಲಾಯಿಸಿದ್ದ ವೇಳೆ ವಿಮಾನ ಅಪಹರಿಸಿ ಪತನಗೊಳಿಸಲು ಯತ್ನಿಸಿದ್ದನಾದರೂ, ಕೊನೆ ಕ್ಷಣದಲ್ಲಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದ ಎಂದು ತಿಳಿದು ಬಂದಿದೆ.
ಆ ವಿಮಾನದಲ್ಲಿದ್ದ ಪರಿಚಿತ ವ್ಯಕ್ತಿಯೊಬ್ಬರ ಕಾರಣಕ್ಕಾಗಿ ಆತ ನಿರ್ಧಾರ ಬದಲಿಸಿದ್ದ ಎಂದು ಅನುಮಾನಿಸಲಾಗಿದೆ.
ಈ ಬೆಳವಣಿಗೆಯ ಕುರಿತು ಯುಎಇ, ಇಸ್ರೇಲ್ ಅಧಿಕಾರಿಗಳು ಮತ್ತು ಫ್ಲೈದುಬೈ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಬುಧವಾರ ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ಎಫ್‌ಜೆಡ್1073 ವಿಮಾನದಲ್ಲಿದ್ದ ಸಹ ಪೈಲಟ್ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದ್ದ. ಆರೋಪಿಯನ್ನು ಒಮಾನ್ ಪ್ರಜೆ ಹಮಾಮ್ ಅಲ್ ಹಮಾಮಿ ಎಂದು ಗುರುತಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

