ಕಾಸರಗೋಡು: ವಂದೇ ಮಾತರಂನ 150ನೇ ವಾರ್ಷಿಕದ ಅಂಗವಾಗಿ ಪೆರಿಯದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರಗೋಷ್ಠಿ ವಿರುದ್ಧ ವಿವಿಧ ವಿದ್ಯಾರ್ಥಿ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿತು.
ಕೆಎಸ್‍ಯು, ಎಸ್‍ಎಫ್‍ಐ, ಎಐಎಸ್‍ಎಫ್ ಮತ್ತು ಮುಸ್ಲಿಂಲೀಗ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಂಎಸ್‍ಎಫ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಳಯದ ಮುಖ್ಯದ್ವಾರದ ಬಳಿ ಪ್ರತಿಭಟನೆ ಆಯೋಜಿಸಿತ್ತು. ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಬರುವ ಪ್ರಜ್ಞಾಪ್ರವಾಹ್ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಆರೆಸ್ಸೆಸ್ ಹಿನ್ನೆಲೆಯುಳ್ಳವರಾಗಿದ್ದು, ಇವರನ್ನು ವಿಶ್ವ ವಿದ್ಯಾಲಯದೊಳಗೆ ಪ್ರವೇಶಿಸಲು ಅನುವುಮಾಡಿಕೊಡುವುದಿಲ್ಲ ಎಂಬ ಘೋಷಣೆ ಕೂಗುತ್ತಾ ಪ್ರತಿಭಟನೆಯಲ್ಲಿ ತೊಡಗಿದರು.
ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ತಡೆದು ಚದುರಿಸಿದ್ದಾರೆ.ವಿದ್ಯಾರ್ಥಿ ಪ್ರತಿಭಟನೆ ಲೆಕ್ಕಿಸದೆ, ಜೆ. ನಂದ ಕುಮಾರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಎಬಿವಿಪಿಯ ಹೊರತಾಗಿ ಇತರ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಕಾರ್ಯಕ್ರಮ ಬಹಿಷ್ಕರಿಸಿತ್ತು. ಕಾರ್ಯಕ್ರಮಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅ. 7ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.



