ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಪಟ್ಟಿಯಿಂದ ತಪ್ಪಾಗಿ ತೆಗೆದುಹಾಕಲಾದ ಅರ್ಹ ಮತದಾರರನ್ನು 'ಫಾರ್ಮ್ 6'ರ ಮೂಲಕ ಮರುಸೇರ್ಪಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವು (ಇಸಿ) ರಾಜ್ಯ ಚುನಾವಣಾ ಆಯೋಗಗಳಿಗೆ ನಿರ್ದೇಶನ ನೀಡಿದೆ.
ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಅದು ಎಸ್‌ಐಆರ್‌ನ್ನು ನಿರ್ವಹಿಸಿರುವ ಬಗ್ಗೆ ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕ ಸಮಾಜದ ಗುಂಪುಗಳ ಕಳವಳಗಳ ನಡುವೆಯೇ ಗುರುವಾರ ಈ ನಿರ್ದೇಶನ ಹೊರಬಿದ್ದಿದೆ. ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೂ ಅವು ಒತ್ತಾಯಿಸುತ್ತಿವೆ.
ಆಯೋಗದ ನಿರ್ದೇಶನದ ಬೆನ್ನಿಗೇ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ.ಖುರೇಷಿ ಅವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಫಾರ್ಮ್ 6 ಕೇವಲ ಹೊಸ ಮತದಾರರಿಗಾಗಿ ಮಾತ್ರ ಇರುವುದರಿಂದ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರು ಅದನ್ನು ಭರ್ತಿ ಮಾಡುವಂತಿಲ್ಲ. ಬಲವಂತದಿಂದ ಅದನ್ನು ಭರ್ತಿ ಮಾಡಿದವರು ಒಂದು ವರ್ಷದ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧವನ್ನು ಮಾಡುತ್ತಾರೆ. ಅವರನ್ನು ಬಲವಂತಗೊಳಿಸುವ ಆಯೋಗದ ಅಧಿಕಾರಿಗಳು ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಸ್‌ಐಆರ್‌ಗೆ ಮೊದಲಿನ ಮತ್ತು ನಂತರದ ಮತದಾರರ ಪಟ್ಟಿಗಳನ್ನು ಹೋಲಿಕೆ ಮಾಡಿ, ಮೊದಲಿನ ಪಟ್ಟಿಯಲ್ಲಿದ್ದು ಈಗ ಬಿಟ್ಟುಹೋಗಿರುವ ವ್ಯಕ್ತಿಗಳನ್ನು ಗುರುತಿಸಲಿದ್ದಾರೆ. ಬಳಿಕ ಈ ಅಧಿಕಾರಿಗಳು ಮನೆ-ಮನೆಗೆ ತೆರಳಿ ಅವರ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿ, ಅರ್ಹರಾಗಿದ್ದಲ್ಲಿ ಫಾರ್ಮ್ 6ರ ಮೂಲಕ ಮತ್ತೆ ಹೆಸರು ನೋಂದಾಯಿಸಲು ನೆರವಾಗಲಿದ್ದಾರೆ ಎಂದು ಆಯೋಗವು ತಿಳಿಸಿದೆ.
ಈ ಸಂಪೂರ್ಣ ಪ್ರಕ್ರಿಯೆಯನ್ನು ಸುಮಾರು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತಾಗಲು ಪ್ರತಿಯೊಬ್ಬ ಬಿಎಲ್‌ಒ ವಾರಕ್ಕೆ ಕನಿಷ್ಠ 20ರಿಂದ 25 ಮತದಾರರನ್ನು ಸಂಪರ್ಕಿಸಬಹುದು. ಈ ರೀತಿ ಹೊಸದಾಗಿ ಸೇರ್ಪಡೆಯಾದವರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುವುದು. ಅಂತಿಮವಾಗಿ, ಯಾರಾದರೂ ಅರ್ಹ ಮತದಾರರು ಬಿಟ್ಟುಹೋಗಿದ್ದರೆ ಅವರಿಗೆ ಮತ್ತೊಂದು ಅವಕಾಶ ನೀಡಲು ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಅದು ವಿವರಿಸಿದೆ.
ಪ್ರತಿಪಕ್ಷಗಳ ಪ್ರಕಾರ, 2025ರಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ದೇಶದಲ್ಲಿದ್ದ ಒಟ್ಟು 94.7 ಕೋಟಿ ಮತದಾರರ ಪೈಕಿ, 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 13.8 ಕೋಟಿ (ಶೇಕಡಾ 14.6) ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ತೆಗೆದುಹಾಕಲಾಗಿದೆ.

