ಉಪ್ಪಳ: ಯೋಗಾನಂದ ಸ್ವಾಮಿಗಳ ನಾಮಾಂಕಿತದಲ್ಲಿ ಯೋಗದ ಧೀ:ಶಕ್ತಿಯನ್ನು ವೈದಿಕ ಪರಂಪರೆಯ ಮೂಲಕ ಆತ್ಮೋನ್ನತಿಯ ಜಾಗೃತಿ ಈ ಸೋಮಯಾಗದ ಮೂಲಕ ಸಾಕಾರಗೊಳ್ಳುತ್ತಿದೆ. ಅಗ್ನಿಹೋತ್ರಿಗಳ ಪರಂಪರೆಯನ್ನು ನಾವೆಲ್ಲರೂ ಸೇರಿ ಇಂತಹ ಉತ್ತಮ ಕಾರ್ಯಕ್ಕೆ ಸಹಕರಿಸಿ ಉಳಿಸಬೇಕಿದೆ. ಕಲಿಯುಗದಲ್ಲಿ ಜನಸಾಮಾನ್ಯರಲ್ಲಿ ಜೀವಂತಿಕೆಯಿದೆ. ಅಂತಹ ಸಾಮಾನ್ಯ ಕಾರ್ಯಕರ್ತರು ಈ ಯಾಗವನ್ನು ನಿಯೋಜಿಸಿರುವುದು ಬೇರೆಡೆಗೆ ಮಾರ್ಗದರ್ಶಿಯಾಗಿದೆ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನದಲ್ಲಿ ತಿಳಿಸಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಪರಮಪೂಜ್ಯ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಅಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಮಾತನಾಡಿದರು.
ಆಶೀರ್ವಚನಗೈದ ಯಾಗ ನೇತೃತ್ವ ವಹಿಸಿರುವ ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಶ್ರೀಗಳು, ಸಂಸ್ಕøತಿ ನಾಶಕ್ಕೆ ನಾವೇ ಕಾರಣರಾಗುತ್ತಿರುವುದು ಆತಂಕಕಾರಿಯಾಗಿದೆ. ನಾವು ಆಚರಿಸಿ, ಉಳಿಸಿ ರಾಷ್ಟ್ರರಕ್ಷೆ ಮಾಡುವುದರ ಜೊತೆಗೆ ಮುಂದಿನ ಪೀಳಿಗೆಗೆ ಸಂಸ್ಕøತಿ ತತ್ವವನ್ನು ಉಳಿಸಬೇಕಿದೆ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಇಳಿ ವಯಸ್ಸಿನಲ್ಲೂ ತಾವು ಆಳವಾಗಿ ಅಧ್ಯಯನಗೈದು ಸಮಾಜೋನ್ನತಿಗೆ ಧಾರೆ ಎರೆಯುತ್ತಿರುವ ವೈದಿಕ ವಿದ್ವಾಂಸ ವೈದಿಕನ್ ಪೆರುಂಪಟಪ್ಪನ್ ಹೃಶಿಕೇಶನ್ ಸೋಮಯಾಜಿಪ್ಪಾಡ್ ಅವರನ್ನು ವಿಶೇಷವಾಗಿ ಗುರುತಿಸಿ ಸನ್ಮಾನಿಸಲಾಯಿತು. ಶ್ರೀಧರನ್ ನಂಬೂದಿರಿ ಅವರು ಸನ್ಮಾನಿತರ ವಿವರ ಪರಿಚಯ ನೀಡಿದರು.
ಮುಖ್ಯ ಅತಿಥಿಗಳಾಗಿ ಪುಷ್ಪರಾಜ್ ಜೈನ್ ಅಭಿಶ್ ಬಿಲ್ಡರ್ಸ್ ಮಂಗಳೂರು, ಸಂತೋಷ್ ಕುಮಾರ್ ಶೆಟ್ಟಿ ಮಾತಾ ಬಿಲ್ಡರ್ಸ್ ಮಂಗಳೂರು, ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಸಂಜಯ ಪ್ರಭು ಮಂಗಳೂರು, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾಜೇಂದ್ರ, ಕಾಸರಗೋಡಿನ ಉದ್ಯಮಿ ಸುರೇಶ್ ಮತ್ತು ಉಕ್ಕಿನಡ್ಕ ಆಯುರ್ವೇದ ಆಸ್ಪತ್ರೆಯ ಡಾ.ಸ್ವಪ್ನಾ ಜಯಗೋವಿಂದ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಯಾಗ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ ಮತ್ತು ಡಾ.ಶ್ರೀಧರ ಭಟ್ ಉಪ್ಪಳ ಉಪಸ್ಥಿತರಿದ್ದರು. ಕು.ಕವನಾ ಪ್ರಾರ್ಥನಾಗೀತೆ ಹಾಡಿದರು. ಬಾಲಕೃಷ್ಣ ಶೆಟ್ಟಿ ವಾನಂದೆಸ್ವಾಗತಿಸಿ, ಹರೀಶ್ ಮಾಡ ವಂದಿಸಿದರು. ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

