೧. ಪ್ರತಿಯೊಂದಕ್ಕೂ ‘ತೆ’ಗಳಿಕೆ ನಿಮಗೆ ಇಷ್ಟವಾಗುತ್ತದೆಯೇ?
ದೈನ್ಯತೆ, ಸಾಮ್ಯತೆ, ಪ್ರಾಮುಖ್ಯತೆ, ಪ್ರಾಧಾನ್ಯತೆ, ನೈಪುಣ್ಯತೆ, ವೈಶಿಷ್ಟ್ಯತೆ, ವೈವಿಧ್ಯತೆ, ಗಾಂಭೀರ್ಯತೆ, ಮಾಲಿನ್ಯತೆ, ಸೌಜನ್ಯತೆ, ಸ್ವಾತಂತ್ರ್ಯತೆ, ಔದಾರ್ಯತೆ... ಸಾಕಾ? ಇನ್ನೂ ‘ತೆ’ಗಳಿಕೆ ಬೇಕಾ? ಈ ಎಲ್ಲ ಪದಗಳಲ್ಲೂ (ಮತ್ತು ಇಂಥವೇ ಇನ್ನೂ ಅನೇಕ ಪದಗಳಲ್ಲಿ) ‘ತೆ’ ಬೇಕಿಲ್ಲ. ‘ತೆ’ಯನ್ನು ತೆಗೆದಾಗಿನ ರೂಪವೇ ಸರಿ. ಏಕೆ ಎಂದು ವಿವರಿಸುತ್ತೇನೆ:
ಗುಣವಾಚಕ ವಿಶೇಷಣ (adjective) ಮತ್ತು ಗುಣವಾಚಕ ನಾಮಪದ (noun) - ಇವು ಒಂದು ಪದದ ಎರಡು ಬೇರೆಬೇರೆ ರೂಪಗಳು. ಜಕ್ಕಣನು ಶಿಲ್ಪಕಲೆಯಲ್ಲಿ ನಿಪುಣ ವ್ಯಕ್ತಿ. ಇಲ್ಲಿ ‘ನಿಪುಣ’ ಎಂಬುದು ಗುಣವಾಚಕ ವಿಶೇಷಣ (adjective). ಶಿಲ್ಪಕಲೆಯಲ್ಲಿ ಜಕ್ಕಣನ ನೈಪುಣ್ಯ ಪ್ರಶಂಸಾರ್ಹವಾದುದು. ಇಲ್ಲಿ ‘ನೈಪುಣ್ಯ’ ಎಂಬುದು ಗುಣವಾಚಕ ನಾಮಪದ (noun). ಇಂಗ್ಲಿಷ್‌ನಲ್ಲಿ ಅರ್ಥ ಮಾಡಿಕೊಳ್ಳುವುದು ನಿಮಗೆ ಸುಲಭವಾದರೆ, ‘expert' ಎಂಬುದು ಗುಣವಾಚಕ ವಿಶೇಷಣ (adjective), ಮತ್ತು, expertise ಎಂಬುದು ಗುಣವಾಚಕ ನಾಮಪದ (noun).
ಕೆಲವು ಗುಣವಾಚಕ ವಿಶೇಷಣ ಪದಗಳಿಗೆ ಕೊನೆಯಲ್ಲಿ ‘ತೆ’ (ಮೂಲ ಸಂಸ್ಕೃತದಲ್ಲಾದರೆ ‘ತಾ’) ಅಕ್ಷರ ಸೇರಿಸಿದರೆ ಅವು ಗುಣವಾಚಕ ನಾಮಪದಗಳಾಗುತ್ತವೆ. ಉದಾ: ಏಕ->ಏಕತೆ; ಸಮಾನ-ಸಮಾನತೆ; ವಿಶೇಷ-ವಿಶೇಷತೆ; ದೃಢ->ದೃಢತೆ ಇತ್ಯಾದಿ. ಇಲ್ಲೆಲ್ಲ ‘ತೆ’ಗಳಿಕೆ ಒಳ್ಳೆಯದೇ.
ಆದರೆ...
ಬೇರೆ ಹಲವಾರು ಗುಣವಾಚಕ ವಿಶೇಷಣ (adjective) ಪದಗಳು ಬೇರೆಯೇ ರೀತಿಯಲ್ಲಿ ಗುಣವಾಚಕ ನಾಮಪದ (noun) ರೂಪ ಪಡೆಯುತ್ತವೆ.
ದೀನ->ದೈನ್ಯ; ಸಮ->ಸಾಮ್ಯ; ಪ್ರಮುಖ->ಪ್ರಾಮುಖ್ಯ; ಪ್ರಧಾನ-> ಪ್ರಾಧಾನ್ಯ; ನಿಪುಣ->ನೈಪುಣ್ಯ; ವಿಶಿಷ್ಟ-ವೈಶಿಷ್ಟ್ಯ; ವಿವಿಧ->ವೈವಿಧ್ಯ; ಗಂಭೀರ->ಗಾಂಭೀರ್ಯ; ಮಲಿನ->ಮಾಲಿನ್ಯ; ಸುಜನ->ಸೌಜನ್ಯ; ಸ್ವತಂತ್ರ->ಸ್ವಾತಂತ್ರ್ಯ;ಉದಾರ->ಔದಾರ್ಯ ಇತ್ಯಾದಿ. ಹೀಗೆ ಗುಣವಾಚಕ ನಾಮಪದ (noun) ರೂಪ ಪಡೆದಂಥವುಗಳಿಗೆ ಮತ್ತೆ ‘ತೆ’ ಸೇರಿಸುವುದು ಅನಾವಶ್ಯಕ.
ಒಂದುವೇಳೆ ನಿಮಗೆ ‘ತೆ’ಗಳಿಕೆ ತುಂಬ ಇಷ್ಟ ಅಂತಾದರೆ ಇವೇ ಪದಗಳನ್ನು ಅನುಕ್ರಮವಾಗಿ ದೀನತೆ, ಸಮತೆ, ಪ್ರಮುಖತೆ, ಪ್ರಧಾನತೆ, ನಿಪುಣತೆ, ವಿಶಿಷ್ಟತೆ, ವಿವಿಧತೆ, ಗಂಭೀರತೆ, ಮಲಿನತೆ, ಸುಜನತೆ, ಸ್ವತಂತ್ರತೆ, ಉದಾರತೆ... ಎಂದು ಬರೆಯಬಹುದು. ಅದರಲ್ಲೇನೂ ತಪ್ಪಿಲ್ಲ. ಆದರೆ ‘ಊಟ ಬೇರೆ ಪಡಿ ಬೇರೆ’ ರೀತಿಯಲ್ಲಿ, ಅಥವಾ, ‘ಉಂಡೂ ಹೋದ ಕೊಂಡೂ ಹೋದ’ ರೀತಿಯಲ್ಲಿ, ಈಗಾಗಲೇ ನಾಮಪದರೂಪ ಗಳಿಸಿದ್ದಕ್ಕೆ ಮತ್ತೆ ‘ತೆ’ ಗಳಿಕೆ ಖಂಡಿತ ಬೇಡ.
ಇನ್ನೂ ಗೊಂದಲ ಇದೆಯಾದರೆ ಹೀಗೆ ಮಾಡಿ. ಕೊನೆಯಲ್ಲಿ ‘ತೆ’ ಎಂದು ಇರುವ ಪದದಲ್ಲಿ (ನಿಮ್ಮ ಓದಿಗೆ ಸಿಕ್ಕಿದ್ದಾದರೂ ಇರಬಹುದು, ನೀವೇ ಬರೆದಿದ್ದಾದರೂ ಇರಬಹುದು) ಕ್ಷಣಿಕವಾಗಿ ಒಮ್ಮೆ ‘ತೆ’ಯನ್ನು ಅಳಿಸಿಬಿಡಿ. ಆಗ ಉಳಿಯುವ ರೂಪವು ಗುಣವಾಚಕ ವಿಶೇಷಣ (adjective) ಆಗಿದ್ದರೆ ಆ ಪದದಲ್ಲಿ ‘ತೆ’ ಸರಿಯಾಗಿಯೇ ಸೇರಿಕೊಂಡಿದೆ, ಹಾಗಾಗಿ ‘ತೆ’ ಇರಬೇಕು ಎಂದು ಅರ್ಥ. ಒಂದುವೇಳೆ ಗುಣವಾಚಕ ನಾಮಪದ (noun) ಆಗಿದ್ದರೆ ಆ ಪದದಲ್ಲಿ‘ತೆ’ ಹೆಚ್ಚುವರಿಯಾಗಿ ಸೇರಿದೆ, ಕಿತ್ತೊಗೆಯಬಹುದು ಎಂದರ್ಥ.
====
೨. ‘ಇಸ್ಟು ದಿನ ಈ ವೈಕುಂಠ ಎಸ್ಟು ಕಸ್ಟಕರ’ ಆಗಿತ್ತು ಗೊತ್ತೇ?
ಇದೊಂದು ಹೊಸ ಫ್ಯಾಷನ್. ಇತ್ತೀಚೆಗಷ್ಟೇ ಹೆಚ್ಚು ಗಮನಕ್ಕೆ ಬರುತ್ತಿದೆ. ಅಷ್ಟು, ಇಷ್ಟು, ಕಷ್ಟ, ಇಷ್ಟ ಮುಂತಾದ ಪದಗಳನ್ನು ಮತ್ತು ಅವುಗಳ ರೂಪಗಳನ್ನು ಕ್ರಮವಾಗಿ ‘ಅಸ್ಟು’, “ಇಸ್ಟು’, ‘ಕಸ್ಟ’, “ಇಸ್ಟ’ ಅಂತೆಲ್ಲಬರೆಯುವುದು. ಮೊದಮೊದಲು ಉಚ್ಚಾರ ಮಾತ್ರ ಹಾಗೆ ತಪ್ಪಾಗಿ ಇರುತ್ತಿತ್ತು, ಈಗೀಗ ಬರವಣಿಗೆಯಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಮುಖ್ಯವಾಗಿ ಅಂತರಜಾಲದಲ್ಲಿನ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿನ ಕನ್ನಡ ಬರವಣಿಗೆಯಲ್ಲಿ. ಬಹುಶಃ ಕೀಲಿಮಣೆ ಸಮಸ್ಯೆ ಇದಕ್ಕೆ ಒಂದು ಕಾರಣವಿರಬಹುದು. ಅಥವಾ, ಯಥಾಪ್ರಕಾರ ಕನ್ನಡದ ದರಿದ್ರ ಸುದ್ದಿವಾಹಿನಿಗಳ ಉದ್ಘೋಷಕ/ಕಿಯರ ಕೊಡುಗೆಯೂ ಆಗಿರಬಹುದು. ಅದೇನೇ ಇರಲಿ, ನನಗೆ ಗೊತ್ತಿರುವ ಕೆಲವು ಪ್ರಸಿದ್ಧ ಬರಹಗಾರರು ಮತ್ತು ಓದುಗರು ಸಹ ಕನ್ಸಿಸ್ಟೆಂಟಾಗಿ ಈ ತಪ್ಪನ್ನು ಮಾಡುತ್ತಲೇ ಇದ್ದಾರೆ. ನಿರ್ದಾಕ್ಷಿಣ್ಯದಿಂದ ಅವರಿಗೆ ಇದನ್ನು ಹೇಳಿ ಸರಿಪಡಿಸದಿದ್ದರೆ ಮುಂದೊಂದು ದಿನ ಅದೇ ಸರಿ ಅಂತಾಗಬಹುದು!
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಕೆಲವು ಪದಗಳ ಸರಿ ರೂಪ :
ಅ) ಅಲವತ್ತುಕೊಳ್ಳು (ಅಸಮಾಧಾನ/ಆತಂಕ ವ್ಯಕ್ತಪಡಿಸು) ಸರಿ. ಅವಲತ್ತುಕೊಳ್ಳು ತಪ್ಪು. ಇದನ್ನು ನೆನಪಿಡಲು ನೆನೆಗುಬ್ಬಿ: ‘ಯ,ರ,ಲ,ವ,...’ ವ್ಯಂಜನಾನುಕ್ರಮ.
ಆ) ಅವುಡುಗಚ್ಚಿ (ಅವುಡು ಎಂದರೆ ದವಡೆ, jaw. ಅವುಡು + ಕಚ್ಚಿ = ಅವುಡುಗಚ್ಚಿ. ಒತ್ತಡದಿಂದ ಬಾಯ್ಮುಚ್ಚಿಕೊಂಡಿದ್ದು ಎಂಬರ್ಧ) ಸರಿ. ಅವಡುಗಚ್ಚಿ ತಪ್ಪು.
ಇ) ಅಪರರಾತ್ರಿ (ಮಧ್ಯರಾತ್ರಿ ಆದ ಬಳಿಕ) ಸರಿ. ಅಪರಾತ್ರಿ ತಪ್ಪು. ಏಕೆಂದರೆ, ಅಪರಾಹ್ನ ಎನ್ನುವಾಗ ಅಪರ+ಅಹನ್ ಎಂದಾಗುವಂತೆಯೇ ಅಪರ+ರಾತ್ರಿ = ಅಪರರಾತ್ರಿ
ಈ) ಅನಂತರ (ನಡುವೆ ಸಮಯದ ಅಂತರವಿಲ್ಲದ್ದು. ಅನ್+ ಅಂತರ = ಅನಂತರ) ಸರಿ. ‘ನಂತರ’ ತಪ್ಪು.
ಉ) ಅನನುಕೂಲ (ಅನುಕೂಲವಿಲ್ಲದ್ದು. ಅನ್+ ಅನುಕೂಲ = ಅನನುಕೂಲ) ಸರಿ. ‘ಅನಾನುಕೂಲ’ ತಪ್ಪು.
FEEDBACK: samarasasudhi@gmail.com
===========