ಪುಸ್ತಕ: ಅಕ್ಕನ ಆಂತರ್ಯದ ಭಾವಗಳು
ಕೃತಿ ಕತೃ:ಪೂರ್ಣಿಮಾ ಸುರೇಶ್
ಬರಹ:ಚೇತನಾ ಕುಂಬಳೆ
ಬಹುಮುಖ ಪ್ರತಿಭೆಯಾದ ಪೂರ್ಣಿಮಾ ಸುರೇಶ್ ಅವರು ನಾಟಕ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟಿಯಾಗಿ, ಸಾಹಿತ್ಯ ಕಾರ್ಯಕ್ರಮಗಳ ಸಂಘಟಕಿ ಹಾಗೂ ನಿರೂಪಕಿಯಾಗಿ, ಕತೆ ಕವನ ಲಲಿತ ಪ್ರಬಂಧಗಳಿಂದ ಗಮನಾರ್ಹ ಸಾಹಿತಿಯಾಗಿ ಸದಾ ಕ್ರಿಯಾಶೀಲರಾಗಿರುವರು. ಪೂರ್ಣಿಮಾ ಅವರು 'ನನ್ನೊಳಗಿನ ಭಾವ' ಮತ್ತು 'ಶಬ್ಧ ಸೀಮೆಯ ಆಚೆ ' ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. 'ಅಕ್ಕನಂತೊಬ್ಬಳು ಅನುರಕ್ತೆ' ಅವರ ಮೂರನೇ ಕವನ ಸಂಕಲನ.
"ಕವಿತೆಗೂ ಏಕಾಂತ ಬೇಕು, ಕವಿಗೂ ಏಕಾಂತ ಬೇಕು. ಪರಸ್ಪರ ತೆರೆದುಕೊಳ್ಳಲು, ಸುಖಿಸಲು, ಆನಂದಿಸಲು, ಆನಂದ ಕವಿತೆಯ ಬಹುದೊಡ್ಡ ಗುಣ. ಆ ಆನಂದ ಸುಖವನ್ನೂ ಮೀರಿದ್ದು. ಕವಿತೆಯ ಅಂತರಂಗದಲ್ಲಿ ನೋವಿರುತ್ತದೆ. ಭವದ ಬಹುಮುಖವೂ ಇರುತ್ತದೆ. ಹೀಗಾಗಿ, ಕವಿತೆ ಬಗೆಬಗೆಯ ಭಾವಸ್ತೋತ್ರವಾಗಿ ಹೃದಯವನ್ನು ಆದ್ರ್ರಗೊಳಿಸುತ್ತದೆ. ರಸಾಶ್ರುವಿಗೆ ಕಾರಣವಾಗುತ್ತದೆ ಎಂದು ಕವಿತೆಯ ಬಗ್ಗೆ ತನ್ನ ಅನಿಸಿಕೆಗಳನ್ನು ಹೇಳುತ್ತಾರೆ. ಈ ಸಂಕಲನಕ್ಕೆ ಸಮಕಾಲೀನ ಕಾವ್ಯ ಲೋಕದ ಅಗ್ರಮಾನ್ಯ ಕವಿಗಳಾದ ಹೆಚ್. ಎಸ್ ವೆಂಕಟೇಶ ಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ಹಾಗೆಯೇ ಲೇಖಕಿಯ ಕವಿತೆಗಳ ಮೊದಲ ವಿಮರ್ಶಕರೂ, ಮಾರ್ಗದರ್ಶಕರೂ ಕನ್ನಡದ ಹಿರಿಯ ಕವಿಗಳೂ ಆದ ಬಿ.ಆರ್ ಲಕ್ಷ್ಮಣ ರಾವ್ ಅವರು ಬೆನ್ನುಡಿ ಬರೆದಿದ್ಧಾರೆ.
ಇದರಲ್ಲಿ ಒಟ್ಟು 52 ಕವನಗಳಿದ್ದು ವಸ್ತುವಿನಾಧಾರದಲ್ಲಿ ಒಂದಕ್ಕಿಂತೊಂದು ಕವಿತೆಗಳು ಭಿನ್ನವಾಗಿವೆ. 'ಅಕ್ಕನಂತೊಬ್ಬಳು ಅನುರಕ್ತೆ' ಕವಿತೆಯಲ್ಲಿ ಮಲ್ಲಿಕಾರ್ಜುನನ್ನು ಮೆಚ್ಚಿದ ಅಕ್ಕನಂತೆ 'ಅವನಿಗಾಗಿ ಹಂಬಲಿಸುವ ಹೆಣ್ಣಿನ ಮನದ ತುಡಿತಗಳನ್ನು ಕಾಣಬಹುದು. 'ಚಹಾಯಣ' ಕವಿತೆಯಲ್ಲಿ,
"ಮನೆಗೆ ಧಾವಿಸಿದವಳೇ ನೀರನ್ನು ಕುದಿಯಲಿಟ್ಟೆ
ಚಹಾ ಪುಡಿಯ ಜೊತೆ ಅದು ಲಲ್ಲೆಗರೆಯುತ್ತಾ
ಥೈಥಕ ಯಕ್ಷಗಾನವಾಡುತ್ತಿರಲು-
ಮನ ಮರಳಿ ಪಡೆಯಿತು ನೆಮ್ಮದಿಯ ಮಡಿಲು
ಒಳ ಹೊರಗೆ ಬಿಗಿದ ಕಟ್ಟುಗಳೆಲ್ಲ ಆಗಿ ಸಡಿಲ.
-ಗೆಳೆಯಾ ನೀನು ಕಪ್ಪಿನಲಿ ತುಂಬಿರುವ
ಬಿಸಿಬಿಸಿ ಚಹಾ ಕಣೋ..."
ಎಂಬಲ್ಲಿ ಒಂದು ಚಹಾ ನೀಡುವ ಮನಸ್ಸಿನ ನೆಮ್ಮದಿಯ ಕುರಿತು, ಚಹಾದ ಜೊತೆಗೆ ಆತನ ಮೇಲಿನ ಪ್ರೀತಿಯನ್ನೂ ವ್ಯಕ್ತಪಡಿಸುತ್ತಾರೆ.
ಹಕ್ಕಿ ಹಾರುತ್ತಾ ನೀಲಾಂಬರದ ಮಹಲ ದೀಪಾಲಂಕಾರವಾಗಿ ಮಾರ್ಪಡುವ ಅದ್ಭುತವನ್ನು ಮನದನಿವಷ್ಟು ಸವಿಯಬೇಕೆಂದೂ ಅರಮನೆ ತೊರೆದವನ ಕಾಂತಿಯುಕ್ತ ತೇಜಸ್ವಿನಲ್ಲಿ ಮಿಂದೆದ್ಧು ಶುಚಿಗೊಳ್ಳುವ ಅದಮ್ಯವಾದ ತನ್ನ ಆಸೆಯನ್ನು ವ್ಯಕ್ತ ಪಡಿಸುತ್ತಾರೆ. ಈ ಸಂಕಲನದ ಒಂದು ಅದ್ಭುತ ಕವಿತೆ 'ಮೀನ್ಮನೆ'. ಇಲ್ಲಿ ಹೆಣ್ಣಿನ ಬದುಕನ್ನು ಮೀನ್ಮನೆಯ ಮೀನಿಗೆ ಹೋಲಿಸಲಾಗಿದೆ. ಹೆಣ್ಣು ತಮಗೆ ಹಾಕಿಕೊಟ್ಟ ಚೌಕಟ್ಟಿನೊಳಗೆ ಒಂದು ಹನಿ ಪ್ರೀತಿಗಾಗಿ ಹಾತೊರೆಯುವುದನ್ನೂ, ತಮ್ಮ ಸ್ಪರ್ಶ ಕಚಗುಳಿಯಲ್ಲಿ ಸುಖ ನೀಡುವ ಗಂಡಿಗೆ ತಮ್ಮಷ್ಟು ಆಳಕ್ಕಿಳಿಯಲೂ,ಅವರೆತ್ತರಕ್ಕೆ ತಮ್ಮನ್ನು ಕೊಂಡೊಯ್ಯಲು ಅಸಾಧ್ಯ ಎನ್ನುತ್ತಾರೆ. ತಮ್ಮನ್ನು ಸ್ವತಂತ್ರ್ಯ ಹಕ್ಕಿಯಂತೆ ಹಾರಲು ಬಿಡದೆ ಎಷ್ಟೇ ಬೇಲಿ ಹಾಕಿ ಬಂಧಿಸಿದರೂ ತಾವು ಬದುಕಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಗಮನಿಸಬಹುದು.
'ನೀವು ನೆನಪಾಗುತ್ತೀರಿ' ಕವನದಲ್ಲಿ ಹೆಣ್ಣಿನ ಬಗೆಗಿನ ತಾತ್ಸಾರ, ಆಕೆಯ ಮೇಲಿನ ಶೋಷಣೆಯನ್ನು ಎಳೆಎಳೆಯಾಗಿ ಹೇಳುತ್ತಾರೆ. 'ಗಂಡುಮಗು ನೀನಾಗಬಾರದಿತ್ತೇ' ಎಂಬ ಮಾತಿನ ಇರಿತ, ಚೂರಿ ನೋಟದ ಹರಿತ,ಮರ್ಮವನ್ನು ಘಾಸಿಗೊಳಿಸುವಂತಿರುತ್ತವೆ. ದೊಡ್ಡವಳಾದೊಡನೆ ಹೊರಜಗತ್ತಿಗೆ ತೆರೆದುಕೊಳ್ಳಲೂ ಬಿಡದೆ ಕತ್ತಲ ಕೋಣೆಗೆ ದೂಡುವ ಶ್ರಮ, ಗಂಡನೇ ದೇವರೆಂದು ಆತನೊಡನೆ ಹೆಜ್ಜೆ ಹಾಕಬೇಕೆಂಬ ಕಟ್ಟಾ????, ನಿತ್ಯ ನೋವನ್ನೇ ಜಗಿದರೂ ಧೈರ್ಯಗುಂದದವರು. ಶತಮಾನಗಳ.ಸಂಕೋಲೆಯಲ್ಲಿ ಬಂಧಿತರಾದರೂ ಎಲ್ಲವನ್ನೂ ಕೊಡವಿ ಹೊಸ ಬದುಕನ್ನು ಕಟ್ಟಿಕೊಂಡು ಸಮಾನತೆಯ ಹಾದಿಯಲ್ಲಿ ಹೆಜ್ಜೆಯಿಡಬೇಕೆಂಬ ದೃಢ ನಿರ್ಧಾರವಿದೆ.
ಅದೊಮ್ಮೆ ಹಂಪಿಗೆ ಭೇಟಿನೀಡಿದಾಗ, ಅಲ್ಲಿಯ ಭಗ್ನಾವಶೇಷಗಳನ್ನು ಕಂಡು ಅವರು ತಲ್ಲಣಗೊಳ್ಳುತ್ತಾರೆ. ಒಂದು ಕಾಲದಲ್ಲಿ ವೈಭವದಿಂದ ಇದ್ದ ಹಂಪಿಯನ್ನು ಮುತ್ತೈದೆಗೆ ಹೋಲಿಸಿದರೆ ಅನ್ಯರ ದಾಳಿಗೊಳಗಾದ ಈಗ ಹಂಪಿಯನ್ನು ಅತ್ಯಾಚಾರಕ್ಕೊಳಗಾದ ಹೆಣ್ಣಿಗೆ ಹೋಲಿಸುತ್ತಾರೆ. 'ನಿರಿಗೆಗಳ ನಡೆ' ಕವಿತೆಯಲ್ಲಿ ಮೊದಮೊದಲು ಸೀರೆಯುಟ್ಟು ಸಂಭ್ರಮಿಸಿದ ಹೆಣ್ಣಿನ ಮನದ ನಾಚಿಕೆ, ನವಿರು ಭಾವಗಳನ್ನು ಅಂದವಾಗಿ ಅಕ್ಷರ ರೂಪಕ್ಕಿಳಿಸುತ್ತಾರೆ. ಅದರೆಡೆಯಲ್ಲೂ ನೀನು ಹೆಣ್ಣು ಎಂಬ ಅವನ ಎಚ್ಚರಿಕೆಯ ಧ್ವನಿ ಕಿವಿಗೆ ಬೀಳುತ್ತದೆ. 'ಬಾರೆ ಗೆಳತಿ ಆಡೋಣ' ಕವಿತೆಯಲ್ಲಿ ಗೆಳತಿಯೊಂದಿಗೆ ಕಳೆದ ಬಾಲ್ಯದ ಸವಿನೆನಪುಗಳಿಗೆ ಜೀವ ತುಂಬುತ್ತಾರೆ. 'ಪ್ರೇಯಸಿಯಾಗಿರುವುದೆಂದರೆ' ಎಂಬ ಕವಿತೆಯಲ್ಲಿ ಪ್ರೇಯಸಿಯಾಗಿರುವುದೇ ಒಂದು ಖುಷಿ. ಅದನ್ನು ಬಣ್ಣಿಸಲಸಾಧ್ಯ. ಆಕೆಗೆ ಯಾವುದೇ ಜವಾಬ್ದಾರಿಗಳಿಲ್ಲ ಕಟ್ಟುಪಾಡುಗಳಿಲ್ಲ, ಪ್ರಣಯದ ಭಾವ ಧರಿಸಿ ಪ್ರೀತಿ ತೋರಿದರಾಯ್ತು. ಆದರೆ, ಮಡದಿಯಾದಶಳಿಗೆ, ಅವನ ಉಪಚಾರ ಮಾಡಬೇಕು, ಎಷ್ಟು ಸೇವೆ ಮಾಡಿದರೂ ಗೊಣಕುವಿಕೆಯನ್ನು ಕೇಳಬೇಕು, ಮುಗಿಯದಷ್ಟು ಕೆಲಸ , ದಣಿದರೂ ಹಸನ್ಮುಖಿಯಾಗಿರಬೇಕು ಎನ್ನುತ್ತಾ...
"ಮಡದಿಯಾಗುವುದೆಂದರೆ
ಸ್ವಂತ ಬದುಕನ್ನು ಒತ್ತೆಯಿಟ್ಟಂತೆ
ಪ್ರೇಯಸಿಯ ಪದವಿಯೇ ನಿಜಕ್ಕೂ ಸವಿ
ಮೆಚ್ಚಿದಾತ ಮುತ್ತು ಕೊಟ್ಟಂತೆ"
ಎಂದು ಹೇಳುವಲ್ಲಿ ಪ್ರೇಯಸಿಯಾಗಿರಲು ಇಷ್ಟಪಡುವುದನ್ನು ಕಾಣಬಹುದು.
ಹೀಗೆ ವಿಭಿನ್ನ ವಿಷಯಗಳನ್ನಿಟ್ಟುಕೊಂಡು ಪೂರ್ಣಿಮ ಅವರು ಕವಿತೆಗಳನ್ನು ಬರೆಯುತ್ತಾರೆ. ಅವರು ಪದಗಳನ್ನು ಪೋಣಿಸಿ ಕವಿತೆಗಳನ್ನು ಕಟ್ಟುವಲ್ಲಿ ಒಂದು ಭಿನ್ನ ಶೈಲಿಯಿದೆ. ಅವರಲ್ಲಿ ಅಪಾರ ಪದ ಸಂಪತ್ತುಗಳೂ ಇವೆ.. ಕೆಲವೊಂದು ಕವಿತೆಗಳು ಅಂತರಾಳಕ್ಕಿಳಿದು ಕಾಡುತ್ತವೆ. ಮತ್ತೊಂದಿಷ್ಟು ಕವಿತೆಗಳು ಇಷ್ಟವಾಗುತ್ತವೆ. ತನ್ನೆಲ್ಲ ಮನದ ಆಸೆ, ಆಕಾಂಕ್ಷೆಗಳು ಪ್ರೀತಿ ಉತ್ಕಂಠತೆಗಳು ಮುನಿಸು ತಲ್ಲಣಗಳು ಹೀಗೆ ತನ್ನ ಆಂತರ್ಯದ ಭಾವಗಳನ್ನು ಕವಿತೆಗಳಲ್ಲಿ ಹರವುತ್ತಾರೆ.
ಬರಹ: ಚೇತನಾ ಕುಂಬ್ಳೆ
FEEDBACK: samarasasudhi@gmail.com




