ಕಾಸರಗೋಡು: ಸಾಮಾಜಿಕ ಜಾಲ ತಾಣಗಳು ಸಮಾಜಕ್ಕೆ ಪೂರಕವಾದ ಚಟುವಟಿಕೆ ನಡೆಸುವ ರೀತಿಯಲ್ಲಿ ಹೊಸ ತಲೆಮಾರು ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ ಎಂದು ಕೇರಳ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಜಸ್ಟಿಸ್ ಕೆ. ವಿನೋದ್ಚಂದ್ರನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರಿಯರ್ ಗೈಡನ್ಸ್ ಮತ್ತು ಸೈಬರ್ ಕಾನೂನು ತಿಳಿವಳಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ 75ನೇ ಸಂಭ್ರಮ"ಆಜಾದಿ ಕಾ ಅಮೃತ್ ಮಹೋತ್ಸವ್'ಕಾರ್ಯಕ್ರಮದ ಅಂಗವಾಗಿ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಪಿ.ವಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ರಾಜೀವ್, ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ , ವಕೀಲ ಎಂ. ನಾರಾಯಣ ಭಟ್ ಉಪಸ್ಥಿತರಿದ್ದರು.
ಶೈಜಿತ್ ಕರುವಕ್ಕೋಡ್ ಕರಿಯರ್ ಗೈಡೆನ್ಸ್ ತರಗತಿ ನಡೆಸಿದರು. ಕಾಸರಗೋಡು ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಟಿ.ಕೆ ರಮೇಶ್ ಕುಮಾರ್ ಸ್ವಾಗತಿಸಿದರು. ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಕೆ.ಪಿ ಸುನಿಲ್ ವಂದಿಸಿದರು.

