ಕಾಸರಗೋಡು: ಕೋಟ್ಟಾಯಂನಲ್ಲಿ ವೈದ್ಯೆಯನ್ನು ರೋಗಿ ಬಲಿತೆಗೆದುಕೊಂಡ ಘಟನೆ ಹಸಿರಾಗಿರುವ ಮಧ್ಯೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕಿಡಿಗೇಡಿಯೊಬ್ಬ ದಾಂಧಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದಾನೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ಮರ್ ಫಾರೂಕ್ ಬಂಧಿತ. ಗುರುವಾರ ಬೆಳಗ್ಗೆ ಕಾಸರಗೋಡು ಮಾರುಕಟ್ಟೆಯಲ್ಲಿ ಕಾರ್ಮಿಕನಾಗಿರುವ ಅಬೂಬಕ್ಕರ್(53)ಎಂಬವರಿಗೆ ಫಾರೂಕ್ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ತಕ್ಷಣ ಸ್ಥಳೀಯರು ಸೇರಿ ಗಾಯಾಳುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಅಬೂಬಕ್ಕರ್ ಅವರನ್ನು ಕರೆತರುತ್ತಿದ್ದಂತೆ ಹಿಂಬಾಲಿಸಿ ಬಂದ ಫಾರೂಕ್ ಮತ್ತೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ನಗರಠಾಣೆ ಇನ್ಸ್‍ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿಸಲು ಆಗಮಿಸಿದ ಪೊಲೀಸರ ಮೇಲೂ ಫಾರೂಕ್ ಹಲ್ಲೆಗೆ ಮುಂದಾಗಿದ್ದು, ಪೊಲಿಸರು ಬಲ ಪ್ರಯೋಗಿಸಿ ಈತನನ್ನು ವಾಹನಕ್ಕೇರಿಸಿದ್ದಾರೆ. ಮಾದಕದ್ರವ್ಯ ವ್ಯಸನಿಯಾಗಿರುವ ಫಾರೂಕ್ ಈ ಹಿಂದೆಯೂ ಹಲವು ಬಾರಿ ದಾಂಧಲೆ ನಡೆಸಿ ನಂತರ ಈತನನ್ನು ಚಿಕಿತ್ಸೆಗಾಗಿ ಕೋಯಿಕ್ಕೋಡಿಗೆ ಕರೆದೊಯ್ಯಲಾಗಿತ್ತು. ಇಲ್ಲಿಂದ ಆಗಮಿಸಿದ ಈತ ಮತ್ತೆ ಮಾದಕವಸ್ತು ಸೇವಿಸಿ ಮಾರುಕಟ್ಟೆಯಲ್ಲಿ ದಾಂಧಲೆ ನಡೆಸಿದ್ದಾನೆ.
ಫಾರೂಕ್ ದಾಂಧಲೆಯಿಂದ ಜನರಲ್ ಆಸ್ಪತ್ರೆಯಲ್ಲಿ ಅಲ್ಪ ಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು. ಕೋಟ್ಟಯಂನಲ್ಲಿ ಬುಧವಾರ ಬೆಳಗ್ಗೆ ವೈದ್ಯೆಯ ಹತ್ಯೆ ನಡೆದಿದ್ದರೆ, ರಾತ್ರಿ ವೇಳೆ ಇಡುಕ್ಕಿಯ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ಪೊಲೀಸರು ಕರೆತಂದ ಕೈದಿಯೊಬ್ಬ ವೈದ್ಯರು ಹಾಗೂ ದಾದಿಯರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳಲ್ಲಿ ಪೊಲೀಸ್ ವೈಫಲ್ಯ ಎದ್ದುಕಾಣುತ್ತಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.


