ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರಡಾಲ ಚುಳ್ಳಿಕ್ಕಾನ ನಿವಾಸಿ ಸುದರ್ಶನ(34)ಬಂಧಿತ.
ಕಾಸರಗೋಡಿನ ವೈದ್ಯರನ್ನು ಭೇಟಿಯಾಗಿ ಬಸ್ಸಿನಲ್ಲಿ ವಾಪಸಾಗುತ್ತಿದ್ದಾಗ ಘಟನೆ. ಬಾಲಕಿ ಕುಳಿತಿದ್ದ ಸೀಟಿನಲ್ಲಿ ಆರೋಪಿಯೂ ಕುಳಿತಿದ್ದು, ಪ್ರಯಾಣದ ಮಧ್ಯೆ ಬಾಲಕಿಯ ದೇಹ ಸ್ಪರ್ಶಿಸಲು ಮುಂದಾಗಿದ್ದಾನೆ. ಇದರಿಂದ ಬೆದರಿದ ಬಾಲಕಿ ಬೊಬ್ಬಿಟ್ಟಾಗ, ಸನಿಹ ಆಗಮಿಸಿದ ಪ್ರಯಾಣಿಕರು, ಬಸ್ಸನ್ನು ಪೊಲೀಸ್ ಠಾಣೆಗೊಯ್ಯುವಂತೆ ಸೂಚಿಸಿದ್ದರು. ಬಸ್ ಠಾಣೆ ಕಡೆ ತೆರಳುತ್ತಿದ್ದಂತೆ ಆರೋಪಿ ಬಸ್ಸಿನಿಂದ ಧುಮುಕಿ ಪರಾರಿಯಾಗಲೆತ್ನಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಈತನನ್ನು ಹಿಂಬಾಲಿಸಿ ಮೂಕಂಪಾರೆಯ ಇಗರ್ಜಿ ಸನಿಹದಿಂದ ವಶಕ್ಕೆ ತೆಗೆದುಕೊಂಡಿದ್ದರು. ಎಸ್.ಐ ವಿನೋದ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


