ಕಾಸರಗೋಡು: ವಿಶ್ವ ಜಲ ದಿನವಾದ ಶುಕ್ರವಾರ ಕಾಸರಗೋಡು ಜಿಲ್ಲೆಯ ವಿವಿಧೆಡೆ ಸಾಮಾನ್ಯ ಮಳೆಯಾಗುವುದರೊಂದಿಗೆ ಇಳೆಗೆ ತಂಪೆರೆಯಿತು. ಬೇಸಿಗೆ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಕೆಯಿಂದ ಜನತೆ ಕಂಗಾಲಾಗಿರುವ ಮಧ್ಯೆ ಸುರಿದ ಬೇಸಿಗೆ ಮಳೆ ಜನರಲ್ಲಿ ಒಂದಷ್ಟು ನೆಮ್ಮದಿ ತಂದುಕೊಟ್ಟಿತು. ಮಂಜೇಶ್ವರ, ಉಪ್ಪಳ, ಸೋಂಕಾಲು, ಕುಂಬಳೆ, ಬದಿಯಡ್ಕ, ಕಾಸರಗೋಡು, ಮಧೂರು, ಪೆರ್ಲ ಸನಿಹದ ಕಾಟುಕುಕ್ಕೆ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸಾಮಾನ್ಯ ಮಳೆಯಾಗಿದೆ. ಮಂಜೇಶ್ವರ ಆಸುಪಾಸು ಅರ್ಧತಾಸಿಗೂ ಹೆಚ್ಚುಕಾಲ ಮಳೆ ಸುರಿದಿದೆ. ಬೇಸಿಗೆ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೂ ಅಡಚಣೆಯುಂಟಾಯಿತು. ಸರ್ವೀಸ್ ರಸ್ತೆ ಕೆಸರುಮಯವಾಗಿತ್ತು. ಕಳೆದ ಎರಡು ದಿವಸಗಳಿಂದ ಜಿಲ್ಲಾದ್ಯಂತ ಘೂಢೂಘೂ, ಅತಿಯಾದ ಉಷ್ಣಾಂಶ, ಮೋಡಕವಿದ ವಾತಾವರಣವಿತ್ತು.
(ಮಂಜೇಶ್ವರ ಆಸುಪಾಸು ಶುಕ್ರವಾರ ಬೆಳಗ್ಗೆ ಸಾಮಾನ್ಯ ಮಳೆ ಸುರಿಯಿತು.)


