HEALTH TIPS

ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 28ನೇ ವಾರ್ಷಿಕೋತ್ಸವ ಸಂಪನ್ನ- ಕಾಸರಗೋಡಿನಲ್ಲಿ ಕಾಂತಾರ ಸಿನಿಮಾ ಹಾಡುಗಾರ ಸಾಯಿ ವಿಘ್ನೇಶ್ ಸಂಗೀತ ಕಚೇರಿ

ಕುಂಬಳೆ: ಕಾಂತಾರ ಚಿತ್ರದ `ವರಾಹ ರೂಪಂ ದೈವ ವರೇಣ್ಯಂ'ಎಂಬ ಶುದ್ಧ ಶಾಸ್ತ್ರೀಯ ಸಂಗೀತದ ಗಾಯನದ ಮೂಲಕ ಭಾರತಾದ್ಯಂತ ಎಲ್ಲ ಭಾಷಿಕರ ಹೃದಯಕದ್ದ ಗಾಯಕ ಸಾಯಿ ವಿಘ್ನೇಶ್ ಮೊದಲ ಬಾರಿಗೆ ಕಾಸರಗೋಡು ನಗರದ ಲಲಿತಕಲಾ ಸದನದಲ್ಲಿ ಪ್ರತಿಷ್ಠೆ, ಪ್ರಸಿದ್ಧಿಯ ಹಮ್ಮು ಬಿಮ್ಮುಗಳಿಲ್ಲದೇ ಸರಳತೆಯ ಸಾಕಾರ ಮೂರ್ತಿಯಂತೆ ಶಾಸ್ತ್ರೀಯ ಸಂಗೀತದ ನಾದಾನುಸಂಧಾನ ನಡೆಸಿದಾಗ ನಾಡಿನ ಸಂಗೀತ ರಸಿಕರು ನಿಜಕ್ಕೂ ನಿಬ್ಬೆರಗಾದರು. ಗಾನಮಾಧುರ್ಯದಲ್ಲಿ ತಾಳ ಹಾಕುತ್ತಾ ಮುಳುಗೇಳುತ್ತಲೇ ಇದ್ದರು. ಇಂಥದ್ದೊಂದು ಚಾರಿತ್ರಿಕ ಸಂಗೀತ ಸಂಧ್ಯೆ ಭಾನುವಾರ ಕಾಸರಗೋಡಿನ ಲಲಿತಕಲಾ ಸದನವನ್ನು ಅನೇಕ ವರ್ಷಗಳ ಬಳಿಕ ತುಂಬಿದ ಸಭಾಂಗಣವನ್ನಾಗಿಸಿ ಇತಿಹಾಸವೊಂದನ್ನು ದಾಖಲಿಸಿತು.. 


ಕಾಸರಗೋಡಿನ ಪ್ರಸಿದ್ಧ ಸಂಗೀತ ಶಿಕ್ಷಕಿ ಉಷಾ ಈಶ್ವರ ಭಟ್ ಅವರ ಸಂಗೀತ ಶಿಕ್ಷಣ ಶಾಲೆಯಾದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 28ನೇ ವಾರ್ಷಿಕೋತ್ಸವ ಅಂಗವಾಗಿ ದಕ್ಷಿಣ ಭಾರತದ ಖ್ಯಾತ ಯುವ ಗಾಯಕ ಸಾಯಿ ವಿಘ್ನೇಶ್ ಅವರ ಪ್ರಧಾನ ಸಂಗೀತ ಕಛೇರಿ ನಡೆಯಿತು. 

ತಾನೊಬ್ಬ ಯುವಪೀಳಿಗೆಯ ಸ್ಟಾರ್ ವ್ಯಾಲ್ಯೂ ಹೊಂದಿದ ಸೆಲೆಬ್ರಿಟಿ ಗಾಯಕನೆಂಬ ಯಾವುದೇ ಪ್ರದರ್ಶನಾತಿರೇಕಗಳಿಲ್ಲದೇ ಕಾರ್ಯಕ್ರಮ ನೀಡಲು ಬಂದ ಅವರು ಮೊದಲಿಗೆ ಸಾಂಪ್ರದಾಯಿಕ ಸಂಗೀತದಲ್ಲಿ ತನ್ನರಿವು, ಅಧ್ಯಯನ, ಸಾಧನೆ ಮತ್ತು ಪ್ರತಿಭಾ ಕೌಶಲ್ಯ ಏನೆಂಬುದು ಸಂಗೀತಜ್ಞರಿಗೆ ಅರಿವಾಗುವಂತೆ ಪಕ್ವತೆಯಿಂದ ಹಾಡಿದರು. ಎಳೆ ವಯಸ್ಸಿನ ಯುವ ಪ್ರತಿಭೆಯಾದ ಅವರು ಮೋಹಕ ಕಂಠಸಿರಿಯ ಆಕರ್ಷಣೀಯ ಸ್ವರಮಾಧುರ್ಯದ ಸಾಧಕ ಸಂಗೀತಜ್ಞ. ಸಿನಿಮಾ ಸಹಿತ ಮೆಲೋಡಿಯಸ್ ಮ್ಯೂಸಿಕ್‍ಗಳಲ್ಲೂ ಮನೆಮಾತಾದ ಅವರು ಸಂಗೀತದಲ್ಲೂ ಅಪಾರ ಅಧ್ಯಯನದ, ಸಾಧಕನೆಂಬುದಕ್ಕೆ ಅವರ ಸಂಗೀತ ಕಛೇರಿಯೇ ಸಾಕ್ಷಿಯಾಯಿತು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉಪಸ್ಥಿತರಿದ್ದು, ಕಲಾವಿದರನ್ನು ಶಾಲು ಹೊದೆಸಿ ಆಶೀರ್ವಾದ ಮಂತ್ರಾಕ್ಷತೆಗಳನ್ನಿತ್ತು ಹರಸಿದರು. ವಯಲಿನ್‍ನಲ್ಲಿ ವಿದ್ವಾನ್ ಕರೈಕಲ್ ವೆಂಕಟಸುಬ್ರಹ್ಮಣ್ಯನ್, ಮೃದಂಗದಲ್ಲಿ ವಿದ್ವಾನ್ ಎಂ.ಎಸ್.ವೆಂಕಟಸುಬ್ರಹ್ಮಣ್ಯನ್ ಹಾಗೂ ಘಟಂನಲ್ಲಿ ವಿದ್ವಾನ್ ರಿಜು ಉಣ್ಣಿಕೃಷ್ಣನ್ ಪಾಲಕ್ಕಾಡ್ ಸಹಕರಿಸಿದರು. ಡಾ. ಶಾರ್ವರಿ ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಬಿ.ಜಿ.ಈಶ್ವರ ಭಟ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries