ಬೀಜಿಂಗ್: 'ಚೀನಾದೊಂದಿಗೆ ತೈವಾನ್ ಮತ್ತೆ ಒಂದುಗೂಡುವುದನ್ನು ತಡೆಯಲಾಗದು' ಎಂದು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಹೊಸ ವರ್ಷದ ಸ್ವಾಗತ ಭಾಷಣದಲ್ಲಿ ಹೇಳಿದ್ದಾರೆ.
'ತೈವಾನ್ ಜಲಸಂಧಿಯ ಎರಡೂ ಬದಿಗಳಲ್ಲಿರುವ ಚೀನಿಯರು ರಕ್ತ ಸಂಬಂಧದ ಬಾಂಧವ್ಯ ಹೊಂದಿದ್ದಾರೆ' ಎಂದು ಅವರು ದೇಶವನ್ನು ಉದ್ದೇಶಿಸಿ ಹೊಸ ವರ್ಷದ ಸಂದೇಶ ನೀಡಿದ್ದಾರೆ.
'ನಮ್ಮ ತಾಯ್ನಾಡಿನ ಪುನರ್ ಏಕೀಕರಣವು ಕಾಲದ ಬದಲಾವಣೆ. ಇದನ್ನು ತಡೆಯಲಾಗದು' ಎಂದ ಅವರು, ಚೀನಾವು ಸುಧಾರಿತ ರಕ್ಷಣಾ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವುದನ್ನು, ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಅಣೆಕಟ್ಟೆ ನಿರ್ಮಸುತ್ತಿರುವುದನ್ನು ಪ್ರಸ್ತಾಪಿಸಿದರು. ಅತ್ಯಾಧುನಿಕ ಯುದ್ಧ ವಿಮಾನ ವಾಹಕ ನೌಕೆ 'ಫುಜಿಯಾನ್' ಅನ್ನು ಸೇನೆಗೆ ನಿಯೋಜಿಸಿರುವುದು ಹೆಮ್ಮೆ' ಎಂದರು.
ತೈವಾನ್ ವಶಪಡಿಸಿಕೊಳ್ಳಲು ಚೀನಾವು 2022ರಿಂದ ಸತತವಾಗಿ ಪ್ರಯತ್ನಿಸುತ್ತಿದ್ದು, ಮಿಲಿಟರಿ ಕಸರತ್ತುಗಳನ್ನು ತೀವ್ರಗೊಳಿಸುತ್ತಿದೆ. ಯಾರ್ಲುಂಗ್ ತ್ಸಾಂಗ್ಪೊ (ಬ್ರಹ್ಮಪುತ್ರ ನದಿಯ ಟಿಬೆಟ್ ಹೆಸರು) ನದಿಯ ಕೆಳಭಾಗದಲ್ಲಿ ಜಲವಿದ್ಯುತ್ ಯೋಜನೆಯೂ ಆರಂಭಗೊಂಡಿದೆ.
'ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಾ ಯಾವಾಗಲೂ ಇತಿಹಾಸದ ಬಲಭಾಗದಲ್ಲಿ ನಿಲ್ಲುತ್ತದೆ. ವಿಶ್ವ ಶಾಂತಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಎಲ್ಲ ದೇಶಗಳೊಂದಿಗೆ ಜತೆಯಾಗಿ ನಿಲ್ಲುತ್ತೇವೆ' ಎಂದು ಜಿನ್ಪಿಂಗ್ ಹೇಳಿದ್ದಾರೆ.

