ಬದಿಯಡ್ಕ: ಧರ್ಮದ ಆಧಾರದಲ್ಲಿ ಭಾರತವು ಉಳಿದುಕೊಂಡಿದೆ. ಬಹುರೂಪದ ಸಮಾಜದಲ್ಲಿ ಏಕತೆಯನ್ನು ಕಾಣಬೇಕಾಗಿದೆ. ಸತ್ಯದ ಆಧಾರದಲ್ಲಿ ಭಯಪಡದೆ ಜೀವನಮಾಡುವ ಗುಣ ನಮ್ಮದಾಗಬೇಕು. ಅಂತರ್ ಬಾಹ್ಯ ಶುದ್ಧತೆಯನ್ನು ನಾವು ಹೊಂದಿರಬೇಕು. ಹಿಂದಿನ ಕಾಲದಲ್ಲಿ ಇದ್ದ ಪದ್ಧತಿ ಈಗ ಬದಲಾವಣೆಗೊಂಡಿದೆ. ನಾಗರಿಕತೆ ಬದಲಾದರೂ ನಮ್ಮ ಸಂಸ್ಕøತಿ ಶಾಶ್ವತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರು ಹೇಳಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 8ನೇ ದಿನ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಧರ್ಮ, ಸಂಸ್ಕøತಿಯನ್ನು ಉಳಿಸಿಕೊಳ್ಳುವಲ್ಲಿ ಹೆಗಲಿಗೆ ಹೆಗಲುಕೊಡೋಣ. ಹಿಂದೂ ಜೀವನ ಶೈಲಿಗಳನ್ನು ನೆಲೆಗೊಳಿಸುವ ಕೇಂದ್ರ ದೇವಸ್ಥಾನಗಳು. ಅನ್ನದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡುವ ದೇವಸ್ಥಾನಗಳು ಸಮಾಜದ ಏಕತೆಯ ಕೇಂದ್ರವಾಗಿದೆ. ಕಟ್ಟಡಗಳು ಜೀರ್ಣೋದ್ಧಾರಗೊಳ್ಳುವುದರೊಂದಿಗೆ ವ್ಯವಸ್ಥೆಗಳೂ ಪ್ರಗತಿಯಾಗಬೇಕು ಎಂದರು.
ಶ್ರೀಕ್ಷೇತ್ರ ಕೇಮಾರು ಸಾಂದೀಪಿನಿ ಸಾಧನಾಶ್ರಮದ ಪರಮಪೂಜ್ಯ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನಗಳು ಆತ್ಮಶಕ್ತಿಯನ್ನು ತುಂಬುವ ಕೇಂದ್ರವಾಗಬೇಕು. ಕೇವಲ ಅಂಕಗಳಿಕೆಯಿಂದ ಏನನ್ನೂ ಸಾಸಲು ಸಾಧ್ಯವಿಲ್ಲ. ಎಲ್ಲಾ ಸ್ಥರಗಳಲ್ಲಿಯೂ ನಮ್ಮ ಮಕ್ಕಳು ಬೆಳಗಬೇಕು. ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ. ಸಮಾಜದ ಕಟ್ಟಕಡೆಯ ಜನರಿಗೂ ಶಿಕ್ಷಣ ಲಭಿಸಬೇಕು. ಬಡವನ ಕಣ್ಣೀರೊರೆಸುವ ಕಾರ್ಯ ದೇವಸ್ಥಾನದಲ್ಲಿ ನಡೆಯಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡೆಕ್ಕಾನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದುಮ ಶಾಸಕ ಸಿ.ಎಚ್.ಕುಞಂಬು ಉಪಸ್ಥಿತರಿದ್ದು ಮಾತನಾಡಿದರು. ಬೆಂಗಳೂರಿನ ಉದ್ಯಮಿ ಆರ್. ಕೆ.ಭಟ್ ಬೆಳ್ಳಾರೆ, ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ, ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ್ ಭಟ್ ಏತಡ್ಕ, ವಕೀಲ ಎಂ. ನಾರಾಯಣ ಭಟ್, ಡಾ. ಕಿಶೋರ್ ಕುಮಾರ್ ಉಬ್ರಂಗಳ, ಶ್ರೀಕ್ಷೇತ್ರ ಕೊಲ್ಲಂಗಾನದ ತಂತ್ರಿ ಗಣಾರಾಜ ಉಪಾಧ್ಯಾಯ, ಉದ್ಯಮಿ ರಾಜೇಶ್ ಭಟ್ ಉಬರಡ್ಕ, ಗಣ್ಯರುಗಳಾದ ವಿಷ್ಣುಶರ್ಮ ಪಟ್ಟಾಜೆ ತಿರುಪತಿ ಕುಮಾರ ಪೆರ್ಮುಖ, ಗಣೇಶ್ ಕೃಷ್ಣ ಭಟ್ ಅಳಕ್ಕೆ, ವೆಂಕಟಗಿರೀಶ ಪಟ್ಟಾಜೆ, ಕುಂಞಣ್ಣ, ಶ್ರೀನಿವಾಸ ನಾಯ್ಕ್ ಪಿ., ಉದಯಕುಮಾರ್ ಬದಿಯಡ್ಕ, ವೆಂಕಟೇಶ್ವರ ಭಟ್ ಪಟ್ಟಾಜೆ, ಉದಯಕೇಶವ ಭಟ್ ಕೋರಿಕ್ಕಾರು, ಪ್ರತೀಕ್ ಆಳ್ವ ಪೆರಡಾಲ, ಸುಬ್ಬನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ರಾಜೇಶ್ ಚಂಬಲ್ತಿಮಾರು ನಿರೂಪಿಸಿದರು. ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಶ್ಯಾಮಪ್ರಸಾದ ಸರಳಿ ವಂದಿಸಿದರು.

