ಕಾಸರಗೋಡು: ಕೇರಳಾದ್ಯಂತ ತಾಪಮಾನದ ಏರಿಕೆಯೊಂದಿಗೆ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇರಳದಲ್ಲಿ ಈ ವರ್ಷ ಇದೇ ಮೊದಲ ಬಾರಿ ಪಾಲಕ್ಕಾಡ್ ಜಿಲ್ಲೆಯಲ್ಲಿ ತಾಪಮಾಣ 40 ಡಿಗ್ರಿ ಸೆಲ್ಶಿಯಸ್ ದಾಖಲೆಯ ಏರಿಕೆಯಾಗಿದ್ದು, ಏ. 19ರ ತನಕ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಉಷ್ಣಾಂಶ ಏರಿಕೆಯಿಂದ ಸೂರ್ಯ ಕಿರಣದ ಅತಿನೇರಳೆ ವಿಕಿರಣ ಸಹಿತ ಕಾಸರಗೋಡು ಜಿಲ್ಲೆಯಲ್ಲಿ ಈ ವರ್ಷದ ಮೊದಲ ಸೂರ್ಯಾಘಾತ ಪ್ರಕರಣ ಅಜಾನೂರು ಪಂಚಾಯತ್ ನಲ್ಲಿ ಘಟಿಸಿರುವುದಾಗಿ ವರದಿಯಾಗಿದೆ. ಅಜಾನೂರು ಇಕ್ಬಾಲ್ ಹಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಫುಟ್ಬಾಲ್ ಆಟವಾಡುತ್ತಿದ್ದ ಜುಬೈರ್(13) ಎಂಬ ಬಾಲಕನಿಗೆ ಸೂರ್ಯಾಘಾತದಿಂದ ಅಸೌಖ್ಯ ಕಾಣಿಸಿಕೊಂಡಿದ್ದು, ತಕ್ಷಣ ಈತನನ್ನು ಅಜಾನೂರು ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಸೂರ್ಯಾಘಾತ ದೃಢೀಕರಿಸಿದ್ದಾರೆ. ಜುಬೈರ್ ಬೆನ್ನಿನ ಭಾಗದ ಚರ್ಮದ ಮೇಲೆ ಸೂರ್ಯಾಘಾತದಿಂದ ಚರ್ಮ ಬಿರಿದ ಸ್ಥಿತಿಯಲ್ಲಿ ಕಂಡುಬಂದಿತ್ತು.
ಕೇರಳದ 14ಜಿಲ್ಲೆಗಳ ಪೈಕಿ ಇಡುಕ್ಕಿ, ವಯನಾಡ್ ಹೊರತುಪಡಿಸಿ ಕಾಸರಗೋಡು ಸೇರಿದಂತೆ 12 ಜಿಲ್ಲೆಗಳಲ್ಲಿ ಅತಿಯಾದ ತಾಪಮಾನ ಕಂಡುಬಂದಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಬಿಸಿಗಾಳಿ ಮತ್ತು ತಾಪಮಾನ ಏರಿಕೆಯ ಕಾರಣ ಮಧ್ಯಾಹ್ನದ ವೇಳೆ ಯಾರೂ ಮನೆಯಿಂದ ಹೊರಗಿಳಿಯದೆ, ಬಿಸಿಲಿಗೆ ಮೈಯೊಡ್ಡದೆ ನೆರಳಿನಾಶ್ರಯದಲ್ಲಿ ರಕ್ಷಣೆ ಪಡೆಯ ಬೇಕೆಂದು ಹವಾಮಾನಷ ಇಲಾಖೆ ಎಚ್ಚರಿಕೆ ನೀಡಿದೆ.
ಟ



