ಕಾಸರಗೋಡು: ಭಜಕರಲ್ಲಿ ಬಲಗೊಂಡಿರುವ ಭಕ್ತಿಯ ಸಂಕೇತವೇ ಅಲ್ಲಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಗಳಾಗಿವೆ. ದೇವರಿಗೆ ಸಲ್ಲಿಸಲ್ಪಡುವ ಬ್ರಹ್ಮಕಲಶ ಮೂಲಾರ್ಥದಲ್ಲಿ ನಮ್ಮೊಳಗಿನ ಕ್ಲೇಶಗಳು ಮಾಯವಾಗಿ ಹೊಸ ಚೈತನ್ಯಕ್ಕೆ ತೆರೆದುಕೊಳ್ಳಲು ಪ್ರೇರೇಪಿಸುವ ಕಲಶವಾಗಿದೆ. ನಮ್ಮ ಒಳಗಿನ ಅಹಂ ಎಂಬ ಭಾವ ಇಲ್ಲವಾಗಿ ನವ ಪ್ರತಿಷ್ಠೆ ಆಗಬೇಕು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಕಾಸರಗೋಡು ನುಳ್ಳಿಪ್ಪಾಡಿಯ ಶ್ರೀಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಪ್ರತಿಷ್ಠೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಮಾತನಾಡಿದರು.
ಶ್ರೀಅಯ್ಯಪ್ಪ ಸ್ವಾಮಿ ಎಲ್ಲ ದುರಿತಗಳನ್ನೂ ನಿವಾರಿಸುವ, ಧರ್ಮ ಘ್ಲಾನಿಗೊಳಗಾದಾಗ ಸಂಕಟ ತೀರಿಸಲು ಆವಿರ್ಭವಿಸಿದ ಮಹಾನ್ ಶಕ್ತಿ. ಸನ್ಮಸ್ಸು, ಸದ್ಬುದ್ಧಿ ಎಲ್ಲರ ಪಾಲಿಗೆ ಈ ಮೂಲಕ ಪ್ರಾಪ್ತಿಯಾಗಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿದ್ದು ಮಾತನಾಡಿ, ಭಗವಂತನ ಕೃಪಾಕಟಾಕ್ಷವಿದ್ದರೂ ಅದನ್ನು ಕ್ರಿಯಾ ರೂಪದಲ್ಲಿ ಸಾಕಾರಗೊಳಿಸುವ ಸನ್ಮನಸ್ಸು ಭಕ್ತರಿಗೊದಗಿರುವುದರಿಂದ ಇಂತಹ ವೈದಿಕ, ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿವೆ. ಪ್ರಕೃತಿಯಲ್ಲಿ ಎಲ್ಲವೂ ಅನ್ಯೋನ್ಯವಾಗಿ, ಸೌಹಾರ್ಧತೆಯಿಂದ ಬದುಕುವುದೇ ಸಹಜ ಪ್ರವೃತ್ತಿಯಾಗಿರುತ್ತದೆ. ಸನಾತನ ಧರ್ಮವೂ ಇದನ್ನೇ ಪ್ರತಿಪಾದಿಸಿದೆ. ಇಂದು ಜಗತ್ತಿನ ಹಲವೆಡೆ ಯುದ್ಧದ ಭೀತಿ, ಸಂಕಷ್ಟದ ಜನತೆಗಳನ್ನು ಕಾಣುತ್ತಿದ್ದೇವೆ. ಕೆಲವರ ಸ್ವಾರ್ಥ ಲಾಲಸೆಗಳಿಂದ ಇಂತಹ ಗೊಂದಲಗಳು ಹುಟ್ಟಿಕೊಂಡಿದೆ. ಇದರ ಬದಲಿಗೆ ಹೃದಯ ವಿಶಾಲತೆಯೊಂದಿಗೆ ಹೊಂದಾಣಿಕೆಯ ಬದುಕು ಸಾಗಿಸಿದಾಗ ಬದುಕು ಸುಂದರವಾಗಿ ಕ್ಲೇಶ ರಹಿತವಾಗುತ್ತದೆ. ಯಾವುದೇ ಮತ ಗ್ರಂಥಗಳೂ ಅಶಾಂತಿಯನ್ನು ಪ್ರತಿಪಾದಿಸಿಲ್ಲ. ಆದರೆ, ಅದನ್ನು ಗ್ರಹಿಸದ ಕೆಲವು ಅಸಂತುಷ್ಠಿ ವ್ಯಕ್ತಿಗಳು ಅಸಮತೋಲನ ಸೃಷ್ಟಿಸುತ್ತಿದ್ದಾರೆ.ಇದರಿಂದ ಪಾರಾಗಲು ಆಧ್ಯಾತ್ಮತ, ಧರ್ಮದ ಹಾದಿ ಸೂಕ್ತವಾದುದು ಎಂದವರು ಈ ಸಂದರ್ಭ ಕರೆ ನೀಡಿದರು.
ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉದ್ಯಮಿ ಪಿ.ಬಿ.ಅಚ್ಚು ನಾಯ್ಮಾರಮೂಲೆ, ಪಿ.ಬಿ.ತೌಸೀಫ್ ನಾಯ್ಮಾರಮೂಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿ ಶ್ರೀಕ್ಷೇತ್ರದ ಸಕಲ ಕಾರ್ಯಚಟುವಟಿಕೆಗಳಿಗೆ ಬೆಂಬಲ ಘೋಷಿಸಿದರು.
ಉದ್ಯಮಿ ಮಂಜುನಾಥ ಕಾಮತ್ ಕಾಸರಗೋಡು, ಬಾಲಕೃಷ್ಣ ಚೆನ್ನಿಕೆರೆ, ಕಿಶೋರ್ ಕುಮಾರ್, ಹರೀಶ್ ಕೋಟೆಕಣಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುನಿಲ್ ಕೆ.ಆರ್.ಚೆನ್ನಿಕೆರೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೋಟೆಕಣಿ ವಂದಿಸಿದರು.ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಂಪನ್ನಗೊಂಡ ಬ್ರಹ್ಮಕಲಶಾಭಿಷೇಕ:
ಶ್ರೀಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ವಿವಿಧ ವೈಧಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಕಾರ್ಮಿಕತ್ವದಲ್ಲಿ ಬೆಳಿಗ್ಗೆ ನೆರವೇರಿತು. ಬೆಳಗ್ಗೆ 6ಕ್ಕೆ ಗಣಪತಿ ಹೋಮ, 7.34 ರಿಂದ 9.37ರ ಮಧ್ಯೆ ವೃಷಭ ಲಗ್ನ ಶುಭಮುಹೂರ್ತದಲ್ಲಿ ಅಷ್ಟಬಂಧಲೇಪನ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಿತು. . ಸಾಂಸ್ಕøತಿಕ ಕಾರ್ಯಖ್ರಮದ ಅಂಗವಾಗಿ ಸಂಜೆ 5ಕ್ಕೆ ಭರತನಾಟ್ಯ, ರಾತ್ರಿ 8ಕ್ಕೆ ಶ್ರೀ ರಾಮನಾಥ ಸಾಂಸ್ಕøತಿಕ ಯಕ್ಷಗಾನ ತರಬೇತಿ ಕೇಂದ್ರ, ರಾಮನಗರ,ಕೋಟೆಕಣಿ ಇವರಿಂದ ಭಸ್ಮಾಸುರ ಮೋಹಿನಿ, ಶಬರಿಮಲೆ ಶ್ರೀ ಸ್ವಾಮಿಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.



